ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್ ಹೇಳಿಕೆ ನಿಜಕ್ಕೂ ರಾಷ್ಟ್ರ ಭಕ್ತಿಯ ಕಿಚ್ಚು ಹೊತ್ತಿಸುವಂತಿತ್ತು
ನಮ್ಮಲ್ಲಿ ಅನೇಕ ಅಧಿಕಾರಿಗಳು ತಾವು ಅಧಿಕಾರದಲ್ಲಿ ಇರುವ ತನಕ ಮಾತ್ರ ಆಯಾ ಭಾಗಗಳಲ್ಲಿ ಒಂದಿಷ್ಟು ಪರಿಚಿತರಾಗಿರುತ್ತಾರೆ. ಜನಪ್ರತಿನಿಧಿಗಳ ವಿಷಯದಲ್ಲೂ ಅಷ್ಟೆ.
ಪತ್ರಕರ್ತನಾಗಿ ನಾನು ಸುಮಾರು ಮಂದಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಶ್ರೇಣಿಯಿಂದ ಡಿಐಜಿ ತನಕ ಸಮೀಪದಿಂದ ಬಲ್ಲೆ. ಇವರಲ್ಲಿ ಸಾಕಷ್ಟು ಮಂದಿ ಸೇವೆಯಲ್ಲಿರುವಾಗ ನಮ್ಮೊಂದಿಗೆ
ಮಾತನಾಡಲೂ ಸಹ ಕೊಂಚ ಸಮಯವೇ ಇಲ್ಲವೇನೋ ಎಂಬಂತೆ ವರ್ತಿಸಿದವರೇ ಹೆಚ್ಚು. ಅಂಥವರನ್ನು ಅವರ ನಿವೃತ್ತಿಯ ಬಳಿಕವೂ ಗಮನಿಸುತ್ತಿದ್ದೇನೆ. ಆಗ ತುಂಬಾ ಬ್ಯುಸಿ ಮತ್ತು ನಮಗಾಗಿ ಐದು ನಿಮಿಷಗಳ ಕಾಲಾವಕಾಶವನ್ನು ನೀಡುವುದು ಕಷ್ಟಸಾಧ್ಯವೆಂದು ಬಿಂಬಿಸಿಕೊಳ್ಳುತ್ತಿದ್ದ ಇದೇ ಅಧಿಕಾರಿಗಳು ಈಗ ಹೊಟೇಲ್ಗಳಲ್ಲೋ, ಸಭೆ ಸಮಾರಂಭಗಳಲ್ಲೋ ನಮ್ಮನ್ನು ಕಂಡಾಗ ಅತ್ಯಂತ ಆತ್ಮೀಯರಂತೆ ವರ್ತಿಸುವುದು ಹಾಗು ನಮ್ಮೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಇಷ್ಟಪಡುವುದನ್ನು ಗಮನಿಸಿದಾಗ, “ಹೋಗಯ್ಯ ನಮಗೀಗ ಪುರಸೊತ್ತಿಲ್ಲ” ಎಂದು ಮನದಲ್ಲೇ ಅಂದುಕೊಂಡು ಅವರು ಅಧಿಕಾರದಲ್ಲಿದ್ದಾಗ ಹೇಗೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರೋ ಹಾಗೇ ಮಾಡಬೇಕೆನಿಸುತ್ತದೆ.
ಜನಪ್ರತಿನಿಧಿಗಳ ವಿಷಯಗಳಲ್ಲೂ ಅಷ್ಟೇ. ನಮ್ಮ ಪರಿಚಿತರು ಸಚಿವರೋ, ಸಂಸದರೋ ಅಥವಾ ಶಾಸಕರೋ ಆಗಿ ಆಯ್ಕೆಯಾದಾಗಲೂ ಇದೇ ವರ್ತನೆಗಳನ್ನು ಗಮನಿಸಿದ್ದೇನೆ. ಅಧಿಕಾರದಲ್ಲಿರುವಾಗ ಪಕ್ಷಭೇದ ಮರೆತು ಇತರೆ ಪಕ್ಷಗಳ ಕಾರ್ಯಕರ್ತರುಗಳೂ ಸಹ ಈ ಜನಪ್ರತಿನಿಧಿ ನಮ್ಮಿಂದಲೇ ಆಯ್ಕೆಯಾದವರು ಎಂಬಂತೆ ಓಡಾಡುವುದನ್ನು ನೋಡಿದ್ದೇನೆ. ಬಹುಶಃ ನಿಮಗೂ ಒಂದಿಲ್ಲೊಂದು ಸಂದರ್ಭದಲ್ಲಿ ಈ ಜನಪ್ರತಿನಿಧಿಗಳೂ ಹಾಗೂ ಅಧಿಕಾರಿಗಳು ಅಧಿಕಾರದಲ್ಲಿರುವಾಗ ಹೇಗೆ ವರ್ತಿಸುತ್ತಾರೆ ಹಾಗೂ ಅಧಿಕಾರದಿಂದ ಇಳಿದ ಬಳಿಕ ಹೇಗಿರುತ್ತಾರೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಂಡು ನೋಡಿ.
ಯಾವ ಜನಪ್ರತಿನಿಧಿ ಅಧಿಕಾರದಿಂದ ಇಳಿದ ಬಳಿಕವೂ ಹಾಗೂ ಯಾವ ಅಧಿಕಾರಿ ನಿವೃತ್ತಿಯ ಬಳಿಕವೂ ತನ್ನ ಜನಪ್ರಿಯತೆ ಕಾಯ್ದುಕೊಳ್ಳುತ್ತಾರೋ, ಸಮಾಜಮುಖಿಯಾಗಿರುತ್ತಾರೋ ಅಂಥವರು ಮಾತ್ರ ತಮ್ಮ ಸೇವಾವಧಿಯಲ್ಲಿಯೂ
ಅಧಿಕಾರದ ಘನತೆ ಹಾಗೂ ದರ್ಪ ಮರೆತು ಕೆಲಸ ಮಾಡಿರುತ್ತಾರೆಯೋ ಅಂಥವರು ಮಾತ್ರ ಅಧಿಕಾರ ಇಲ್ಲದ ಸಂದರ್ಭದಲ್ಲೂ ಜನಮನ್ನಣೆ ಗಳಿಸಲು ಸಾಧ್ಯ. ಇಂಥವರಲ್ಲಿ ದಾವಣಗೆರೆಯ ನಿವೃತ್ತ ಎಸ್.ಪಿ. ರವಿನಾರಾಯಣ್ ಸಹ ಒಬ್ಬರು. ನಿವೃತ್ತಿಯ ಬಳಿಕವೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾರ್ವಜನಿಕ ಸಂಪರ್ಕದಲ್ಲಿದ್ದುಕೊಂಡು ಅವಕಾಶ ಸಿಕ್ಕಾಗಲೆಲ್ಲಾ ನಾಗರೀಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಸಾಮಾನ್ಯ ಅಧಿಕಾರಿಯಾಗಿ ಇಲಾಖೆಯ ಸೇವೆಗೆ ಸೇರಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿವೃತ್ತರಾದವರು. ಆಂಟಿ ನಕ್ಸಲ್ ಸ್ಕ್ವಾಡ್ (ಎಎನ್ಎಸ್) ಮುಖ್ಯಸ್ಥರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಗಟ್ಟಿ ಗುಂಡಿಗೆ ಇದ್ದವರಿಂದ ಮಾತ್ರ ಇದು ಸಾಧ್ಯವಾಗುವಂತಹದ್ದು.
ರವಿನಾರಾಯಣ್ ಅವರ ಸೇವಾವಧಿಯ ರೋಮಾಂಚನಕಾರಿ ಘಟನೆಗಳು ಒಂದೆರಡಲ್ಲ. ಅವುಗಳನ್ನು ಒಂದೊಂದಾಗಿಯೇ ಬರೆಯುತ್ತಾ ಹೋದರೆ ನೈಜ ಘಟನೆಗಳನ್ನಾಧರಿಸಿದ ನೂರಾರು ಕಿರು ಚಿತ್ರಗಳನ್ನು ಮಾಡಬಹುದೇನೋ. ಅವರ ಅನುಭವಗಳ ಹೂರಣಗಳನ್ನು ಮತ್ತೊಮ್ಮೆ ಒಂದೊಂದಾಗಿಯೇ ಬರೆಯಲು ಯತ್ನಿಸುವೆ.
ಈಗ ರವಿನಾರಾಯಣ್ ಅವರ ವಿಷಯ ಪ್ರಸ್ತಾಪಿಸಲು ಮುಖ್ಯ ಕಾರಣ ಮೊನ್ನೆ ಪುಲ್ವಾಮಾದಲ್ಲಿ ಉಗ್ರರ ದುಷ್ಕøತ್ಯಕ್ಕೆ ಭಾರತದ ಹೆಮ್ಮೆಯ ಸೈನಿಕರು ಹುತಾತ್ಮರಾದಾಗ ಅವರು ನೀಡಿದ್ದ ಬಹಿರಂಗ ಹೇಳಿಕೆ.
“ನನ್ನಲ್ಲಿನ್ನೂ ಶಕ್ತಿಯಿದೆ, ಕೆಚ್ಚಿದೆ. ಉಗ್ರರನ್ನು ಮಟ್ಟಹಾಕುವ ಗಟ್ಟಿ ಮನಃಸ್ಥಿತಿಯಿದೆ. ನನಗೊಂದು ಅವಕಾಶ ದೊರೆತರೆ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯುವಂತೆ ಭಾರತಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ. ಉಗ್ರರನ್ನು ಛಿದ್ರ ಛಿದ್ರಗೊಳಿಸಿ ಹತ್ಯೆಗೈಯಲು ನಾನೂ ಸಹ ಮಾನವ ಬಾಂಬ್ ಆಗಿ ನನ್ನನ್ನೇ ಸ್ಫೋಟಿಸಿಕೊಳ್ಳಬಲ್ಲೆ” ಎಂಬ ಅವರ ಸಾಮಾಜಿಕ ಜಾಲತಾಣದ ಹೇಳಿಕೆಗಳಿಂದ ಪ್ರೇರೇಪಣೆಗೊಂಡ ಹಲವಾರು ರಾಷ್ಟ್ರಭಕ್ತರುಗಳು “ನಾವೂ ಸಹ ರಾಷ್ಟ್ರಕ್ಕಾಗಿ ಸ್ಫೋಟಿಸಿಕೊಳ್ಳಲು ಸಿದ್ಧ” ಎಂದು ಪ್ರತಿಕ್ರಿಯಿಸಿರುವುದು ರವಿನಾರಾಯಣ್ ಅವರ ರಾಷ್ಟ್ರಪ್ರೇಮಕ್ಕೆ ಸಾಕ್ಷಿಯಾಗಿದೆ. ಏಕೆಂದರೆ ಎಲ್ಲರ ಹೇಳಿಕೆಗಳು ಅಷ್ಟೊಂದು ಮಹತ್ವದವುಗಳು ಆಗಿರುವುದಿಲ್ಲ. ಯಾವ ವ್ಯಕ್ತಿಯ ಬಾಯಿಂದ ಮಾತುಗಳು ಬರುತ್ತವೆ ಎಂಬುದೂ ಮುಖ್ಯ ತಾನೇ?
ರವಿನಾರಾಯಣ್ ಅವರ ಹೇಳಿಕೆ ಕೇವಲ ಜನಪ್ರಿಯತೆಗಾಗಿ ಅಥವಾ ಆ ಸಂದರ್ಭದ ತಕ್ಷಣದ ಪ್ರತಿಕ್ರಿಯೆ ಮಾತ್ರ ಎಂದು ನನಗೆ ಅನ್ನಿಸಲಿಲ್ಲ. ಎರಡು ನಿಮಿಷ ಅವರೊಟ್ಟಿಗೆ ಮಾತನಾಡಿದ ಎಲ್ಲರಿಗೂ ಬಹುಶಃ ಅವರ ಕಳಕಳಿ ಅಥವಾ ಆಕ್ರೋಶ ತಿಳಿಯುತ್ತದೆ. ನಕ್ಸಲರ ಗುಂಡಿಗೆ ಎದೆಕೊಟ್ಟು ಹೋರಾಟಕ್ಕಿಳಿದಿದ್ದ ಅವರ ಮಾತುಗಳಲ್ಲಿ ಯಾವುದೇ ಕೃತಕತೆ ಅಥವಾ ಒಣ ಕಾಳಜಿ ಇಲ್ಲ.
ಮತ್ತೋರ್ವ ದಕ್ಷ ಅಧಿಕಾರಿ ಶಂಕರ್ ಬಿದರಿಯವರ ಹೇಳಿಕೆಗಳನ್ನೂ ಇಲ್ಲಿ ಉಲ್ಲೇಖಿಸಲೇಬೇಕು.
ಅವರೂ ಸಹ “ನನಗೀಗ 64 ವರ್ಷಗಳಾದರೂ ರಾಷ್ಟ್ರಕ್ಕಾಗಿ ದುಡಿಯುವ ಹುಮ್ಮಸ್ಸು ಕಮ್ಮಿಯಾಗಿಲ್ಲ. ಅವಕಾಶ ಸಿಕ್ಕರೆ ಈಗಲೂ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿದ್ಧ” ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೇ ಅವರು ಮನವಿ ಮಾಡಿಕೊಂಡಿದ್ದಾರೆ.
ಇಬ್ಬರೂ ಅಧಿಕಾರಿಗಳು ಯುವ ಶಕ್ತಿಗೆ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ. ರವಿನಾರಾಯಣ್ ಅವರೇ ಹೇಳಿದಂತೆ ಅವರ ತಂಡದ ನೂರಕ್ಕು ಹೆಚ್ಚು ಅಧಿಕಾರಿಗಳು ತಲಾ ಕನಿಷ್ಠ 1000 ರೂನಂತೆ ಹುತಾತ್ಮ ಯೋಧನ ಕುಟುಂಬಕ್ಕೆ ನೆರವು ನೀಡುತ್ತಿದ್ದಾರೆ. ಅವರುಗಳಿಗೂ “ಜನಮಿಡಿತ” ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಜೈ ಹಿಂದ್
– ಜಿ.ಎಂ.ಆರ್. ಆರಾಧ್ಯ