ನಿಮ್ಮೊಳಗೆ ವಿಷಯಗಳು ಬದಲಾದಾಗ, ನಿಮ್ಮ ಸುತ್ತಲಿನ ವಿಷಯಗಳು ಬದಲಾಗುತ್ತವೆ
ಮನಶ್ಯಾಂತಿ:
ಶಾಂತಿಯೆಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವಂಥಹ ಸಹಜವಾದ ಒಂದು ಮನೋಭಾವನೆ. ಆದರೆ ಅವನಲ್ಲಿ ಉಂಟಾಗುವ ಅತಿಯಾದ ಮೋಹದಿಂದಾಗಿ ಶಾಂತಿಯೊಂದಿಗೆ ಅಶಾಂತಿಯುಂಟಾಗುತ್ತದೆ. ಮನದಲ್ಲಿ ಸ್ವಾರ್ಥವು ತುಂಬಿಕೊಂಡಾಗಲೂ ಅಶಾಂತಿ ಮೂಡುತ್ತದೆ. ಅಜ್ಞಾನ, ಶೋಕ, ಚಿಂತೆ, ದುಃಖ ಮೊದಲಾದವುಗಳೆಲ್ಲವೂ ಅಶಾಂತಿಯ ಪರಿವಾರವಾಗಿದೆ. ಉತ್ಪನ್ನವಾದವುಗಳಿಗೆ ನಾಶವಿರುವಂತೆಯೇ ಶಾಶ್ವತವಾದ ಶಾಂತಿಯು ಅಶಾಂತಿಯನ್ನು ಮೆಟ್ಟಿ ನಿಲ್ಲುತ್ತದೆ. ಆದ್ದರಿಂದ ಮನಶ್ಯಾಂತಿಯು ಮಾನವನ ನಿಜವಾದ ಆಸ್ತಿಯಾಗಿದೆ. ಎಂಥಹದೇ ಸಂದರ್ಭದಲ್ಲಿ ಇದನ್ನು ಕಾಪಾಡಿಕೊಳ್ಳಬೇಕು.
ಶಾಂತಿ-ಅಶಾಂತಿಯೊಂದಿಗೆ ಒಳಿತು ಕೆಡಕುಗಳೂ ತಳುಕು ಹಾಕಿಕೊಳ್ಳುತ್ತವೆ. ಶಾಂತಿ-ಅಶಾಂತಿಯಾಗಲೀ ಒಳಿತು ಕೆಡಕುಗಳಾಗಲೀ ನಮ್ಮ ದೃಷ್ಠಿಯನ್ನವಲಂಬಿಸಿವೆ. ಅಂದರೆ ನಾವು ಹೇಗೆ ನೋಡುತ್ತೇವೆಯೋ ಹಾಗೆ ಗೋಚರವಾಗುತ್ತದೆ. ಇವು ಜೊತೆಯಾಗಿದ್ದಾಗ ಮಾತ್ರ ಒಂದನ್ನೊಂದು ಹೋಲಿಸಿ ಪ್ರತ್ಯೇಕಿಸಿ, ಗುರುತಿಸಲು ಸಾಧ್ಯ. ಕೇವಲ ಶಾಂತಿಯಿದ್ದಾಗ ಅಥವಾ ಒಳಿತೇ ಇದ್ದಾಗ ಒಳಿತು-ಶಾಂತಿಗಳ ಧನಾತ್ಮಕ ಅಂಶ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಜತೆಗೆ ಅಶಾಂತಿ ಅಂದರೆ ಋಣಾತ್ಮಕವಾದದ್ದೇನಾದೂ ಇದ್ದರೆ ಧನಾತ್ಮಕ ಸಂಗತಿಯ ಪೂರ್ಣ ಅರಿವು ಸಾಧ್ಯವಾಗುತ್ತದೆ.
ಧನಾತ್ಮಕ ಅಂಶದ ಪ್ರಾಬಲ್ಯದಿಂದ ಋಣಾತ್ಮಕದ ಪ್ರಭಾವ ಕಳೆಗುಂದುತ್ತದೆ. ಹಾಗೆಯೇ ಋಣಾತ್ಮಕ ಅಂಶದ ಪ್ರಭಾವ ಜಾಸ್ತಿಯಾದಾಗ ಧನಾತ್ಮಕತೆಯ ತೀವ್ರತೆ ಮಸುಕಾಗುತ್ತದೆ.
`ಮನ ಏವ ಮನುಷ್ಯಾಣಾಂ ಕಾರಣಂ ಬಂಧಯೋ’
ಎಂಬಂತೆ ಶಾಂತಿ-ಅಶಾಂತಿ, ಸುಖ ದುಃಖಗಳ ಅನುಭವವು ನಮ್ಮ ಮನಸ್ಸಿನ ಭಾವನೆಯನ್ನು ಅಥವಾ ನಾವು ನೋಡುವ ದೃಷ್ಠಿಯನ್ನು ಅವಲಂಬಿಸಿರುತ್ತದೆ.
ಒಮ್ಮೆ ಬೀರಬಲ್ಲನೊಂದಿಗೆ ಮಾರುವೇಷದಲ್ಲಿ ನಗರ ಸಂಚಾರ ಮಾಡುತ್ತಿದ್ದ ಅಕ್ಬರನಿಗೆ ಜನತೆ ತನ್ನ ಬಗ್ಗೆ ಏನನ್ನು ಯೋಚಿಸುತ್ತಿರಬಹುದೆಂದು ತಿಳಿಯುವ ಕುತೂಹಲವಾಯಿತು. ದೂರದಲ್ಲಿ ಬರುತ್ತಿದ್ದ ಕಟ್ಟಿಗೆಯವನನ್ನು ನೋಡಿದ ‘ಈತ ತನ್ನ ಬಗ್ಗೆ ಏನು ಯೋಚಿಸುತ್ತಿರಬಹುದು’ ಎಂದು ಬೀರಬಲ್ಲನನ್ನು ಪ್ರಶ್ನಿಸಿದ. `ಖಾವಂದರಿಗೆ ಅನಿಸಿದಂತೆ, ಅವನಿಗೂ ಹಾಗೆಯೇ ಅನ್ನಿಸುತ್ತಿರಬಹುದು’ ಎಂದು ಉತ್ತರಿಸಿದನು.
ಅನುಮತಿಯಿಲ್ಲದೆ ಕಟ್ಟಿಗೆ ಕಡಿದು ಮಾರುವ ಆತನ ಬಗ್ಗೆ ರಾಜನಿಗೆ ದುರಭಿಮಾನವಿತ್ತು. ಹತ್ತಿರ ಬಂದಾಗ ಕಟ್ಟಗೆಯವನಿಗೆ ಬೀರಬಲ್ಲನು ‘ನಮ್ಮ ರಾಜನು ಸತ್ತ ಸುದ್ಧಿ ತಿಳಿಯಿತೇ? ಎಂದು ಪ್ರಶ್ನಿಸಿದ.ಕಟ್ಟಿಗೆಯ ಹೊರೆಯನ್ನು ಎಸೆದ ಅವನು ‘ದುಷ್ಟ ರಾಜ ಸತ್ತರೆ ಒಳ್ಳೆಯದಾಯಿತು’ ಎಂದು ಕುಣಿದಾಡಿದ.
ಸ್ವಲ್ಪ ದೂರ ಹೋದಾಗ ಹುಲ್ಲಿನ ಹೊರೆಯನ್ನು ಹೊತ್ತು ಬರುತ್ತಿರುವ ಅಜ್ಜಿಯನ್ನು ಕಂಡು ಅದೇ ಮಾತು ಮುಂದುವರೆಯಿತು. ಅಜ್ಜಿಯ ಬಗ್ಗೆ ರಾಜನಿಗೆ ಕನಿಕರ ಸಹಾನಿಭೂತಿಯಿತ್ತು. ಬೀರಬಲ್ಲನ ಬಾಯಿಯಿಂದ ರಾಜನ ಮರಣವಾರ್ತೆ ಕೇಳಿದ ಆ ಅಜ್ಜಿ ಹುಲ್ಲಿನ ಹೊರೆ ಇಳಿಸಿ `ಪುಣ್ಯಾತ್ಮನ ಬದಲಿಗೆ ವಿಧಿ ನನ್ನನ್ನಾದರೂ ಕೊಂಡೊಯ್ಯಬಾರದಿತ್ತೆ?’ ಎಂದು ಅಳತೊಡಗಿದಳು
ನಾವು ಯಾವುದನ್ನು ಅಥವಾ ಯಾರನ್ನು ಯಾವ ಭಾವನೆಯಿಂದ ನೋಡುತ್ತೇವೆಯೋ ಅದು ನಮಗೆ ಹಾಗೆಯೇ ಕಾಣಿಸುತ್ತದೆ. ಕಪ್ಪು ಗಾಜಿನ ಕನ್ನಡಕದಿಂದ ಕಾಣುವ ಎಲ್ಲಾ ವಸ್ತುಗಳೂ ಕಪ್ಪಾಗಿಯೂ ಹಸಿರು ಗಾಜಿನಿಂದ ನೋಡುವ ಎಲ್ಲವೂ ಹಸಿರಾಗಿಯೂ ಕಾಣುವಂತೆ ನಮ್ಮ ಮನಸ್ಸಿನ ಭಾವನೆಗೆ ತಕ್ಕಂತೆ, ನಾವು ನೋಡುವ ದೃಷ್ಠಿಯಂತೆ ಜಗತ್ತಿನ ಶಾಂತಿ ಅಶಾಂತಿ, ವ್ಯಕ್ತಿಯ ಗುಣಾವಗುಣಗಳು ನಮಗೆ ಕಾಣಿಸುತ್ತವೆ. ಶಾಂತಿ ನಮ್ಮ ಮನದಲ್ಲೇ ಇರುತ್ತದೆ. ಬೇರೆಲ್ಲೂ ಇಲ್ಲ.
ಒತ್ತಡ ನಿವಾರಣೆ:
ಮರವು ದೃಢವಾಗಿ ನಿಂತು ಸೊಂಪಾಗಿ ಬೆಳೆಯಲು ತನ್ನ ಬೇರುಗಳನ್ನು ಸಮೃದ್ಧವಾದ ಮಣ್ಣಿನಲ್ಲಿ ಆಳವಾಗಿ ಇರಿಸುತ್ತದೆ. ಹಾಗೆಯೇ ನಾವು ನಮ್ಮ ಬೇರುಗಳನ್ನು ಆತ್ಮದಲ್ಲಿ ಶಾಂತಿಯಲ್ಲಿ ಹಾಗೂ ಉತ್ತಮ ಆರೋಗ್ಯದಲ್ಲಿ ನಿಲ್ಲಿಸಿ ಒತ್ತಡ ನಿವಾರಣೆ ಮಾಡಿಕೊಳ್ಳಬೇಕು.
ನಮ್ಮ ಮಾತು ನಡವಳಿಕೆ ಧ್ವನಿ ಅಥವಾ ನೋಟದಿಂದ ಯಾರಿಗೂ ಮಾನಸಿಕ ಒತ್ತಡ ನೀಡಬಾರದು. ಯಾರನ್ನೂ ನಿರ್ಲಕ್ಷಿಸಬಾರದು. ಬೇರೆಯವರಿಗೆ ಒತ್ತಡ ಉಂಟು ಮಾಡಿದಾಗ ನಾವು ಕಾರ್ಖಾನೆಯ ಚಿಮಿಣಿಯಾಗುತ್ತೇವೆ. ಮಾಲಿನ್ಯಭರಿತ ಹೊಗೆ ಉಗುಳುವ ಚಿಮಿಣಿ ತನ್ನ ಮೂಲಕ ವಾತಾವರಣವನ್ನು ಕಲುಷಿತಗೊಳಿಸಿ, ಎಲ್ಲರಿಗೂ ಉಸಿರುಕಟ್ಟಿಸುತ್ತದೆ. ಆರೋಗ್ಯ ಹಾಳು ಮಾಡುತ್ತದೆ.
ನಾವೂ ಸಹ ಬೇರೆಯವರ ಮಾತು ಮನೋಭಾವ ವರ್ತನೆಗಳಿಂದ ಒತ್ತಡಕ್ಕೊಳಗಾಗಬಾರದು. ಹಾಗೆ ನಾವು ಒತ್ತಡಕ್ಕೊಳಗಾದಾಗ ಅಸಮಧಾನವಾಗಿ ಅದು ಬಹಳ ಕಾಲ ಉಳಿದು ಅಸ್ವಸ್ಥರಾಗಿ ಧೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಇದು ಪಕ್ಕದವರು ಸಿಗರೇಟ್ ಸೇದಿ ನಾವು ಹೊಗೆ ತೆಗೆದುಕೊಂಡಂತಾಗುತ್ತದೆ.
ನಮ್ಮ ಸಾಮಥ್ರ್ಯದ ಕುರಿತು ಅನುಮಾನ, ನಕಾರಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸದ ಕೊರತೆಯಿಂದ ಒತ್ತಡ ಸೃಷ್ಠಿಯಾಗುತ್ತದೆ. ಗಿಡವು ನೀರು ಮತ್ತು ಬೆಳಕಿನ ಕೊರತೆಯಿಂದ ನಿಧಾನವಾಗಿ ಸಾಯುವಂತೆ, ಅನುಮಾನವೂ ಸಹ ನಮ್ಮ ಕಲ್ಪನೆ ವಿಚಾರಧಾರೆಗಳನ್ನು ಹಾಳುಗೆಡವಿ ಉನ್ನತ ಮಟ್ಟಕ್ಕೇರದಂತೆ ತಡೆಯುತ್ತದೆ. ಆದ್ದರಿಂದ ಯಾರಲ್ಲೂ ಒತ್ತಡ ಹುಟ್ಟು ಹಾಕದೇ ಒತ್ತಡಕ್ಕೆ ಒಳಗಾಗದೇ ಒತ್ತಡ ಸೃಷ್ಠಿಸಿಕೊಳ್ಳದೇ ಇರಬೇಕು. ಅದು ಹೇಗೆ?
ದ್ವೇಷವನ್ನು ದ್ವೇಷದಿಂದ, ಸಿಟ್ಟನ್ನು ಸಿಟ್ಟಿನಿಂದ, ತಪ್ಪನ್ನು ತಪ್ಪಿನಿಂದ ಎದುರಿಸುವ ಬಯಕೆ ಒತ್ತಡವನ್ನು ಹುಟ್ಟುಹಾಕುತ್ತದೆ. ಇದನ್ನೇ ಗಾಂಧೀಜಿ `ಕಣ್ಣಿಗೆ ಪ್ರತಿಯಾಗಿ ಕಣ್ಣು ತೆಗೆದುಕೊಂಡಲ್ಲಿ ಇಡೀ ಜಗತ್ತೇ ಕುರುಡಾಗುತ್ತದೆ’ ಎಂದಿದ್ದಾರೆ. ಯಾರಿಗೋ ನೋವು ನೀಡುವ ಅಥವಾ ಅವರನ್ನು ಮಣಿಸುವ ಬಯಕೆಯಿಂದಲೇ ಸಂಬಂಧಗಳು ಸಾಯುತ್ತವೆ. ನಕಾರಾತ್ಮಕ ಭಾವನೆಗಳು ನಮ್ಮಲ್ಲಿ ಆಸಿಡ್ನಂತೆ ಎದ್ದು, ನಮ್ಮ ಗಂಟಲು ಸುಡುತ್ತದೆ. ಜೀರ್ಣಕ್ರಿಯೆ ನಿಧಾನವಾಗುತ್ತದೆ. ವಾಯು ಸಮಸ್ಯೆಯಿಂದ ತಲೆನೋವು, ಬೆನ್ನುನೋವು, ಹೊಟ್ಟೆಉಬ್ಬರ ಬರುತ್ತದೆ.
‘ಕೆಟ್ಟದ್ದು ಎಂಬುದು ಈ ಜಗತ್ತಿನಲ್ಲಿ ಇಲ್ಲ, ಕೆಲವರಲ್ಲಿ ಒಳ್ಳೆಯತನವಿರುವುದಿಲ್ಲ ಅಷ್ಟೇ’ ಎನ್ನುತ್ತದೆ ಸಂತವಾಣಿ. ಪ್ರೀತಿ ಇಲ್ಲದಿರುವುದೇ ದ್ವೇಷ, ಪ್ರಶಾಂತವಾದ ಮನೋಭಾವವಿಲ್ಲದಿರುವುದೇ ಕೋಪ. ಈ ಸತ್ಯ ಅರಿತಾಗ ಒತ್ತಡ ಹೇಗೆ ಉಂಟಾಗುತ್ತದೆ?
ಕತ್ತಲು ತುಂಬಿದ ಕೋಣೆ ಪ್ರವೇಶಿಸಿದಾಗ ಕೆಟ್ಟ ಶಬ್ಧಗಳಿಂದ ಕತ್ತಲನ್ನು ಬಯ್ಯದೇ ದೀಪ ಬೆಳಗಿಸಬೇಕು. ನಕಾರಾತ್ಮಕ ಸನ್ನಿ ವೇಷಗಳು ಎದುರಾದಾಗ ನಕಾರಾತ್ಮಕವಾಗಿ ಪ್ರತಿಕ್ರಯಿಸದೆ ಸಕಾರಾತ್ಮಕವಾಗಿ ಹೆಜ್ಜೆ ಇಡಬೇಕು.
ನಕಾರಾತ್ಮಕ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಚಿಂತಿಸುವುದು ಖಂಡಿತಾ ಸುಲಭವಲ್ಲ. ಹಾಗಿದ್ದಾಗ ಪ್ರತಿಕ್ರಯಿಸದೇ ಸುಮ್ಮನಿದ್ದು ಬಿಡಬೇಕು. ದೈವೀ ಪ್ರಭೆಯ ಬೆಳಕು ನಮ್ಮ ಮೇಲೆ ಬಿದ್ದು ಹೊಳೆಯುತ್ತದೆ ಎಂದು ಹಲವು ಬಾರಿ ಹೇಳಿಕೊಂಡಾಗ ಸಕಾರಾತ್ಮಕ ವ್ಯಕ್ತಿತ್ವವೇ ಸಕಾರಾತ್ಮಕ ಕಂಪನಗಳನ್ನು ಹೊರ ಸೂಸುತ್ತದೆ. ನಮ್ಮಲ್ಲಿ ಈ ರೀತಿ ಯೋಚನೆಯುಂಟಾದಾಗ ನಮ್ಮ ಇರುವಿಕೆಯೇ ಇತರರನ್ನು ಶಾಂತಗೊಳಿಸುತ್ತದೆ. ಇದು ಸಾಧು-ಸಂತರು ಅನಸರಿಸುವ ದಾರಿ.
ವಿಯಟ್ನಾಮ್ ಯುದ್ಧದ ಸಂದರ್ಭದಲ್ಲಿ ಅಮೇರಿಕಾ ಮತ್ತು ವಿಯಟ್ನಾಮ್ ಯೋಧರು ತಮ್ಮ ತಮ್ಮ ಬಂಕರ್ ಗಳಲ್ಲಿ ಕುಳಿತು ಪರಸ್ಪರ ಗುಂಡು ಹಾರಿಸುತ್ತಿದ್ದರು. ಆ ಗುಂಡಿನ ಚಕಮಕಿಯ ಮಧ್ಯೆ ಬೌದ್ಧ ಭಿಕ್ಷುಗಳು ನಿಧಾನವಾಗಿ ಹಾದು ಹೋದರು. ಆಗ ಎರಡೂ ಕಡೆಯ ಸೈನಿಕರು ಗುಂಡು ಹಾರಿಸುವುದನ್ನು ನಿಲ್ಲಿಸಿಬಿಟ್ಟರು. ಬೌದ್ಧ ಭಿಕ್ಷುಗಳು ಮುಂದೆ ಹೋದರೂ ಸೈನಿಕರು ಬಂದೂಕಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಕಾರಣ ಬೌದ್ಧ ಬಿಕ್ಷುಗಳಲ್ಲಿದ್ದ ಶಾಂತಿ ಸೈನಿಕರಲ್ಲೂ ಆವರಿಸಿ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.
ನಮ್ಮ ಆಲೋಚನೆಗಳ ಮೇಲೆ ನಿಯಂತ್ರಣವಿದ್ದಾಗ ನಮ್ಮ ಆರೋಗ್ಯದ ಮೇಲೂ ನಿಯಂತ್ರಣ ಸಾಧ್ಯವಾಗುತ್ತದೆ. ಅತ್ಯುತ್ತಮವಾದ, ಸಕಾರಾತ್ಮಕವಾದ ಸಾಧ್ಯತೆಗಳ ಬಗ್ಗೆ ಸದಾ ಯೋಚಿಸುತ್ತಿದ್ದಲ್ಲಿ, ಊಹಿಸುಕೊಳ್ಳುತ್ತಿದ್ದಲ್ಲಿ ಅನಾರೋಗ್ಯ ಮಾಯವಾಗುತ್ತದೆ. ಜಗತ್ತು ಅಥವಾ ಜನರು ನಾವು ಇಚ್ಛಿಸಿದಂತೆ ಇರುವುದಿಲ್ಲ ಎಂಬುದನ್ನೂ ನಾವು ಅರಿತುಕೊಳ್ಳಬೇಕು. ನಾವು ಇತರರಿಂದ ನಿರೀಕ್ಷಿಸುವ ಹಾಗೆಯೇ ನಾವೂ ಸಹ ಇರಬೇಕು. ಶಾಂತವಾಗಿ ಸರಳವಾಗಿದ್ದು, ಯಾರ ಬಗ್ಗೆಯೂ ಪೂರ್ವಗ್ರಹ ಹೊಂದದೇ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳಬೇಕು. ಆಗ ಒತ್ತಡ ಎಂಬುದೇ ಇರುವುದಿಲ್ಲ. ಜೀವನ ಎಷ್ಟು ಸುಂದರವಾಗಿದೆ, ಸಿಹಿಯಾಗಿದೆ, ಸಂತಸದಿಂದ ಕೂಡಿದೆ ಎಂಬುದು ಅರಿವಾಗುತ್ತದೆ.
ಸೀತಾ ಎಸ್. ನಾರಾಯಣ ಹರಿಹರ