ದೇವರಹಳ್ಳಿಯ ರಂಗನಾಥ ದೇವಾಲಯ

ಇತಿಹಾಸ ಪುಟದಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡಿದ್ದು ಹಲವು ಶಿಲ್ಪಗಳು, ಉದ್ಭವ ಶಿವಲಿಂಗಗಳಿಗೆ ಪೂಜೆ ನಡೆಯುತ್ತಾ ಬಂದಿದೆ. ಇದರ ಜೊತೆಯಲ್ಲಿ ಉದ್ಭವ ನರಸಿಂಹ, ರಂಗನಾಥನಂತಹ ದೇವರುಗಳಿಗೂ ದೇವಾಲಯ ನಿರ್ಮಾಣವಾಗಿದ್ದು ಪೂಜೆಗಳು ನಡೆಯುತ್ತಾ ಬಂದಿರುವದನ್ನ ನೋಡಬಹುದು. ದಕ್ಷಿಣ ಕರ್ನಾಟಕದ ಹಲವು ಕಡೆ ಇಂತಹ ಉದ್ಭವ ಮೂರ್ತಿಗಳಿಗೆ ದೇವಾಲಯಗಳು ನಿರ್ಮಾಣಗೊಂಡಿದ್ದು ಅಂತಹ ದೇವಾಲಯಗಳಲ್ಲಿ ಚನ್ನಗಿರಿ ತಾಲ್ಲೂಕಿನ ದೇವರಹಳ್ಲಿಯೂ ಒಂದು.

ಇತಿಹಾಸ ಪುಟದಲ್ಲಿ ವಿಜಯನಗರದ ಕಾಲದಲ್ಲಿ ಈ ಗ್ರಾಮ ಪ್ರಮುಖವಾಗಿ ಗುರುತಿಸಿಕೊಂಡಿತ್ತು. ಇಲ್ಲಿನ 1654 ರ ಶಾಸನದಲ್ಲಿ ಉಡುಮರಡಿ ರಂಗನಾಥಸ್ವಾಮಿಯ ಉಲ್ಲೇಖವಿದ್ದು ವಿಜಯನಗರ ಕೆಳದಿ ಹಾಗು ಸಂತೆಬೆನ್ನೂರಿನ ಪಾಳೇಗಾರರು ಇಲ್ಲಿನ ದೇವಾಲಯವನ್ನು ಜೀರ್ಣೋದ್ದಾರ ಮಾಡಿದ ಉಲ್ಲೇಖವಿದೆ. ಇನ್ನು ಗಿರಿಯಮ್ಮ ಇಲ್ಲಿನ ದೇವಾಲಯಕ್ಕೆ ನವರಂಗವನ್ನು ನಿರ್ಮಿಸಿದ ಉಲ್ಲೇಖವೂ ಇದೆ.

ಇನ್ನು ಸ್ಥಳೀಯ ಐತಿಹ್ಯದಂತೆ ವಿಜಯನಗರ ಅರಸ ಮಹಾದೇವ ಇಲ್ಲಿ ಬೇಟೆ ಆಡಲು ಬಂದಾಗ ಆತನ ಸೈನಿಕರಿಗೆ ಉಡವೊಂದು ಕಾಣಿಸಿದ್ದು ಅದನ್ನ ಬೆನ್ನತ್ತಿ ಹೋದಾಗ ಹಲವು ಗ್ರಾಮದ ಬಳಿ ಹಲವು ರೂಪದಲ್ಲಿ ಕಾಣಿಸಿತಂತೆ (ಇಲ್ಲಿನ ಹಲವು ಊರುಗಳಿಗೆ ಅದು ಕಾಣಿಸಿದ ರೂಪದ ಹೆಸರನ್ನೆ ಇಡಲಾಗಿದೆ ಎಂಬ ನಂಬಿಕೆ ಇದ್ದು ಇಲ್ಲಿನ ಗ್ರಾಮದವರೆಲ್ಲ ರಂಗನಾಥನ ಭಕ್ತರಾಗಿದ್ದಾರೆ) ಕೊನೆಯಲ್ಲಿ ಇಲ್ಲಿನ ಹುತ್ತದಲ್ಲಿ ಮಾಯವಾಯಿತು. ಸೈನಿಕರು ಹುತ್ತವನ್ನು ಅಗಿದಾಗ ಲಿಂಗ ಸ್ವರೂಪಿ ರಂಗನಾಥ ಕಾಣಿಸಿದ ಕಾರಣ ಇಲ್ಲಿ ಉಡುಗಿರಿ ರಂಗನಾಥಸ್ವಾಮಿ ಎಂಬ ಹೆಸರೇ ಬಂದಿದೆ. ಇಂದಿಗೂ ಇಲ್ಲಿ ಉಡವನ್ನು ಭೇಟೆ ಆಡುವ ಪದ್ದತಿ ಇಲ್ಲಿ ಇಲ್ಲ.

ಸಂಪೂರ್ಣ ನವೀಕರಣಗೊಂಡಿರುವ ರಂಗನಾಥ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹಾಗು ತೆರೆದ ಮುಖಮಂಟಪ ಹೊಂದಿದ್ದು ಗರ್ಭಗುಡಿಯಲ್ಲಿ ಉದ್ಭವ ಲಿಂಗ ಸ್ವರೂಪಿ ರಂಗನಾಥ ಎಂದು ಕರೆಯುವ ಶಿವಲಿಂಗವಿದ್ದು ಲಿಂಗದ ಪೂರ್ವದಲ್ಲಿ ಶಂಖ, ಚಕ್ರ ಹಾಗು ಪಶ್ಚಿಮದಲ್ಲಿ ಜಟೆ ಹಾಗು ಗಂಗೆ ಇದ್ದು ಹರಿಹರ ಸ್ವರೂಪ. ಇನ್ನು ಇದರ ಹಿಂಬದಿಯಲ್ಲಿ ವಿಜಯನಗರ ಕಾಲದ ಕೇಶವನ (ಹರಿಹರ..?) ಶಿಲ್ಪವಿದೆ. ಭಕ್ತರು ರಂಗನಾಥ ಸ್ವರೂಪದಲ್ಲಿ ಅರಾಧಿಸುವ ಕಾರಣ ಉಡುಗಿರಿ ರಂಗನಾಥ ಎಂದೇ ಪ್ರಸಿದ್ದಿ ಪಡೆದಿದೆ. ತೆರೆದ ಮಂಟಪದಲ್ಲಿನ ಕಂಭಗಳಲ್ಲಿನ ಉಬ್ಬು ಶಿಲ್ಪದ ಅಲಂಕರಣ ಗಮನ ಸೆಳೆಯುತ್ತದೆ. ದೇವಾಲಯದ ಶಿಖರದ ಭಾಗ ಹೊರಭಿತ್ತಿಯ ಭಾಗಗಳು ಸಂಪೂರ್ಣವಾಗಿ ನವೀಕರಣಗೊಂಡ ಭಾಗಗಳು.

ಇನ್ನು ರಂಗನಾಥಸ್ವಾಮಿ ಪೂರ್ವ ದಿಕ್ಕಿಗೆ ಅಭಿಮುಖವಾಗಿದ್ದರೆ ಇದರ ಹಿಂಭಾಗದಲ್ಲಿ ಪಶ್ಚಿಮಕ್ಕೆ ಅಭಿಮುಖವಾಗಿ ಶ್ರೀ ಲಕ್ಷ್ಮೀ ದೇವಿಯ ದೇವಾಲಯವಿದೆ. ಇಲ್ಲಿನ ನವರಂಗವನ್ನು ಗಿರಿಯಮ್ಮ ನಿರ್ಮಿಸಿದ ಉಲ್ಲೇಖವಿದೆ.

ಇಲ್ಲಿನ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಚೈತ್ರ ಶುದ್ದ ಹುಣ್ಣಿಮೆಯ ಚಿತ್ತಾ ನಕ್ಷತ್ರದಂದು ನಡೆಯಲಿದ್ದು ಮಾರನೇದಿನ ವಿಜೃಂಭಣೆಯಿಂದ ರಥವನ್ನು ಎಳೆಯುವ ಪದ್ದತಿ ಸುತ್ತ ಮುತ್ತಲಿನ ಗ್ರಾಮದಲ್ಲಿ ನಡೆಯುವ ದೊಡ್ಡ ಜಾತ್ರೆ ಇದು.

ದೇವಾಲಯದ ಆವರಣದಲ್ಲಿ ಹಲವು ಕಿರು ದೇವಾಲಯಗಳಿದ್ದು ಅವುಗಳಲ್ಲಿ ಅಂಜನೇಯ ಹಾಗು ಕಾಳಿಯ ದೇವಾಲಯಗಳು ಮುಖ್ಯವಾದವು. ಬಹುತೇಕ ನಂತರ ಕಾಲದಲ್ಲಿ ಸೇರ್ಪಡೆಗೊಂಡ ದೇವಾಲಯಗಳು. ದೇವಾಲಯಕ್ಕೆ ಹೊಸದಾದ ಪ್ರವೇಶ ದ್ವಾರವಿದ್ದು ದೇವಾಲಯವೇ ಚಿಕ್ಕ ಬೆಟ್ಟದ ಮೇಲೆ ಇದೆ. ಈ ದೇವಾಲಯ ಐತಿಹಾಸಿಕ, ಜಾನಪದ ಹಾಗು ಭಕ್ತಿಯ ಸಂಗಮವಾಗಿದ್ದು ಹಲವು ಆಚರಣೆಗಳು ಇತಿಹಾಸದ ಕೊಂಡಿಯನ್ನ ಹೊತ್ತು ನಿಂತಿದೆ.

ತಲುಪವ ಬಗ್ಗೆ : ಚನ್ನಗಿರಿ – ಸಂತೆಬೆನ್ನೂರಿ ದಾರಿಯಲ್ಲಿ ಚನ್ನಗಿರಿಯಿಂದ ಸುಮಾರು 13 ಕಿ ಮೀ ದೂರದಲ್ಲಿ ದೇವರಹಳ್ಳಿ ಇದೆ.

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್

Leave a Reply

Your email address will not be published. Required fields are marked *