ದಿನಾಂಕ 20 ರಂದು ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ನಾಮಪತ್ರ
ಕಡೆಗೂ ಸುಮಲತಾ ಅವರ ಸ್ಪರ್ಧೆ ಹಾಗೂ ಯಾವ ಪಕ್ಷ ಎಂಬ ಗೊಂದಲಕ್ಕೆ ಇಂದು ತೆರೆ ಬಿದ್ದಿದೆ. ಪತ್ರಿಕಾಗೋಷ್ಠಿಯಲ್ಲಿ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದನ್ನು ಅಧಿಕೃತವಾಗಿ ಸುಮಲತಾ ಅವರು ಪ್ರಕಟಿಸಿದಾಗ ಅವರ ಬಲಭಾಗದಲ್ಲಿ ನಟ ಯಶ್ ಹಾಗೂ ಎಡಭಾಗದಲ್ಲಿ ನಟ ದರ್ಶನ್ ಇದ್ದರು.
ದಿನಾಂಕ 20 ರಂದು ತಾವು ನಾಮಪತ್ರ ಸಲ್ಲಿಸುವುದನ್ನು ತಿಳಿಸಿದ ಅವರು ನನ್ನ ಸ್ಪರ್ಧೆ ಯಾರ ವಿರುದ್ಧವೂ ಅಲ್ಲ ಎಂದರು. ಅಂಬರೀಷ್ ಅವರು ಎಂದು ಸ್ವಾರ್ಥ ರಾಜಕಾರಣ ಮಾಡಲಿಲ್ಲ. ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ನನ್ನ ಸ್ಪರ್ಧೆ ಅನಿವಾರ್ಯವಾಗಿದೆ. ಚುನಾವಣೆಯಲ್ಲಿ ಸೋಲು ಗೆಲುವು ಮತದಾರರ ಹಾಗೂ ದೇವರ ಕೈಯಲ್ಲಿದೆಯೇ ಹೊರತು ನಿಗದಿತ ವ್ಯಕ್ತಿ ಒಬ್ಬರಿಂದಲ್ಲ ಎಂದರು. ಮಂಡ್ಯ ಕ್ಷೇತ್ರದಲ್ಲಿ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬರೀಷ್ ಅಭಿಮಾನಿಗಳು ಇದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ನಾನು ಎಸ್. ಎಂ ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ಭೇಟಿ ಮಾಡಿದ ಉದ್ದೇಶ ಅವರ ಆಶೀರ್ವಾದ ಪಡೆಯುವುದು ಮಾತ್ರ ಆಗಿತ್ತು. ನಾನು ಈ ಸಂದರ್ಭದಲ್ಲಿ ಅಭಿಮಾನಿಗಳಲ್ಲಿ ಮಾಡುವ ಮನವಿ ಏನೆಂದರೆ ವೈಯಕ್ತಿಕವಾಗಿ ನೋವುಂಟು ಮಾಡುವ ಹೇಳಿಕೆಗಳನ್ನು ಯಾರೂ ಕೊಡುವುದು ಬೇಡ ಎಂಬುದು. ರಾಕ್ಲೈನ್ ವೆಂಕಟೇಶ್, ಸುದೀಪ್ ಸೇರಿದಂತೆ ಇಡೀ ಚಿತ್ರರಂಗವೇ ನನ್ನ ಬೆನ್ನಿಗೆ ಇದೆ.
ಇದು ಅಂಬರೀಶ್ ಅವರ ಶಕ್ತಿ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನನ್ನ ಸ್ಪರ್ಧೆಯಿಂದ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಲಿದೆ ಎಂಬ ನಂಬಿಕೆ ಇದೆ ಎಂದರು.