ತಂಟೆಕೋರ ಚೀನಾ ಹತ್ತಿಕ್ಕಲು ಸೇನೆಗೆ ಪೂರ್ಣ ಸ್ವಾತಂತ್ರ್ಯ
ನವದೆಹಲಿ(ಜೂನ್ 21): ತಂಟೆಕೋರ ಚೀನಾದ ನಡತೆಯನ್ನು ಬಗ್ಗುಬಡಿಯಲು ಹಾಗೂ ಚೀನಾದೊಂದಿಗೆ ಇರುವ 3,500 ಕಿಮೀ ಗಡಿ ಉದ್ದಕ್ಕೂ ನಿಯೋಜನೆಗೊಂಡಿರುವ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಚೀನಾದ ಆಕ್ರಮಣಕಾರಿ ವರ್ತನೆಗೆ ತಕ್ಷಣವೇ ತಿರುಗೇಟು ನೀಡಲು ಅನುವಾಗುವಂತೆ ಏನೇ ಕ್ರಮಕೈಗೊಳ್ಳಲು ಸೇನೆ ಈಗ ಸ್ವಾತಂತ್ರ್ಯವಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಿಲಿಟರಿ ಪಡೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ, ನೌಕಾಪಡೆ ಮುಖ್ಯಸ್ಥ ಅಡ್ವಿರಲ್ ಕರಂಬೀರ್ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ಮಾರ್ಷಲ್ ಆರ್. ಕೆ. ಎಸ್. ಭದೂರಿಯಾ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಭೂಗಡಿಭಾಗದಲ್ಲಿ, ವಾಯುಸೀಮೆ, ಸಮುದ್ರ ಮಾರ್ಗಗಳಲ್ಲಿ ಚೀನೀಯರ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿರಬೇಕು. ಚೀನೀ ಪಡೆಗಳು ಯಾವುದೇ ಕುಕೃತ್ಯಕ್ಕೆ ಮುಂದಾದರೂ ಕಠಿಣ ಕ್ರಮ ಅನುಸರಿಸಿ ಎಂದು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಮಿಲಿಟರಿ ಮುಖ್ಯಸ್ಥರಿಗೆ ಸೂಚನೆ ನೀಡಿದರೆನ್ನಲಾಗಿದೆ.
ಲಡಾಖ್ ಗಡಿಭಾಗದಲ್ಲಿ ಚೀನೀ ಸೈನಿಕರು ಭಾರತದ ಭಾಗವನ್ನು ಅತಿಕ್ರಮಣ ಮಾಡಲು ಯತ್ನಿಸಿದರು. ಭಾರತೀಯ ಸೇನಾ ಪಡೆಯ ಪ್ರತಿರೋಧದಿಂದ ಅವರ ಯತ್ನ ವಿಫಲವಾಗಿದೆ. ಇದೇ ವೇಳೆ, ಚೀನೀ ಸೈನಿಕರ ಅಮಾನುಷ ದಾಳಿಯಲ್ಲಿ 20 ಭಾರತೀಯ ಸೈನಿಕರು ಬಲಿಯಾಗಬೇಕಾಯಿತು. ಇದು ದೇಶದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಚೀನೀ ಸೈನಿಕರೆಲ್ಲರನ್ನೂ ಹಿಮ್ಮೆಟ್ಟಿಸಲಾಗಿದೆ ಎಂದು ಸೇನಾ ಮೂಲಗಳು ಹೇಳುತ್ತಿವೆ. ಪ್ರಧಾನಿ ಮೋದಿ ಕೂಡ ಭಾರತದ ಗಡಿಭಾಗದಲ್ಲಿ ಯಾವ ಚೀನೀ ಸೈನಿಕರೂ ಇಲ್ಲ. ಭಾರತದ ಯಾವ ಭಾಗವೂ ಅತಿಕ್ರಮಣವಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ನೈಜ ಘಟನೆಗಳ ಮಂಚಿಕ ಜನಮಿಡಿತ ಚೊಕ್ಕವಾದ ಪತ್ರಿಕೆ