ಗಿಡಮೂಲಿಕೆ ಬಾಳೆ
ನಮ್ಮ ದೇಶದಲ್ಲಿ ಪೂಜೆ, ಹಬ್ಬ ಹರಿದಿನ, ಮದುವೆ, ಮುಂಜಿ ಯಾವುದೇ ಸಮಾರಂಭವಿರಲಿ ಬಾಳೆಎಲೆ, ಬಾಳೆಹಣ್ಣು ಬೇಕೇಬೇಕು. ಜೀರ್ಣ ಕ್ರಿಯೆ ಸರಿಯಾಗಿದ್ದರೆ ನಮ್ಮ ಆರೋಗ್ಯ ಸರಿ ಇದ್ದಂತೆಯೇ ಅರ್ಥ. ಈ ನಮ್ಮ ದೇಹದ ಜೀರ್ಣ ಕ್ರಿಯೆ ಸರಾಗವಾಗಿ ಆಗಲು ಬಾಳೆ ಹಣ್ಣು ತುಂಬಾ ಸಹಕಾರಿಯಾಗಿದೆ. ನಮ್ಮ ಹಿರಿಯರು ಬಾಳೆ ಎಲೆಯನ್ನು ಊಟ ಮಾಡಲು ಉಪಯೋಗಿಸುತ್ತಿದ್ದರು. ಬಿಸಿಯಾದ ಅಡುಗೆಯನ್ನು ಬಾಳೆ ಎಲೆಯ ಮೇಲೆ ಹಾಕಿದಾಗ ಅದರಲ್ಲಿರುವ ಪೋಷಕಾಂಶಗಳು ಊಟದಲ್ಲಿ ಸೇರುತ್ತವೆ.
ಬಾಳೆಹಣ್ಣನ್ನು ಅತ್ಯಂತ ಆರೋಗ್ಯಕರ ಹಣ್ಣೆಂದು ಪರಿಗಣಿಸಲಾಗುತ್ತದೆ. ಈ ಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಪೋಷಕಾಂಶಗಳು, ಅಂಟಿ-ಅಕ್ಸಿಡೆಂಟ್‍ಗಳು ಹೇರಳವಾಗಿವೆ. ಈ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿ ಹೆಚ್ಚಿನ ಫೈಬರ್ ಹೊಂದಿರುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಹಾಗೂ ಬೌಲ್ ಮೂವ್‍ಮೆಂಟ್ ಸರಿಯಾಗಿ ಆಗಿ ಮಲಬದ್ದತೆ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗೆಯೇ ಬಿಪಿ ಕೂಡಾ ನಿಯಂತ್ರಣದಲ್ಲಿರುತ್ತದೆ. ನಿತ್ಯ ಸೇವನೆಯಿಂದ
ನಮ್ಮ ದೇಹದಲ್ಲಿನ ಕಬ್ಬಿಣ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ಕೂಡಾ ಹೋಗಲಾಡಿಸಬಹುದು. ಇದರಿಂದ ರಕ್ತಹೀನತೆಯು ದೂರವಾಗುತ್ತದೆ. ಮೂಳೆಗಳು ಬಲಗೊಳ್ಳುತ್ತವೆ. ಹೃದಯ ಬಲಗೊಳ್ಳುತ್ತದೆ. ಮೆದುಳು ಕ್ರಿಯಾಶೀಲವಾಗುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಬಾಳೆಹಣ್ಣು ಖಿನ್ನತೆಯನ್ನು ಸಹ ದೂರ ಮಾಡುತ್ತದೆ. ಆಮ್ಲೀಯತೆಯನ್ನು ತಗ್ಗಿಸುವಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ ಅಲ್ಸರ್ ತೊಂದರೆಯನ್ನು ಶಮನಗೊಳಿಸುತ್ತದೆ.
ಬಾಳೆಹಣ್ಣಿನಲ್ಲಿ ನೀರಿನ ಅಂಶ ಬಹಳ ಇರುವುದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ ಹಾಗೂ ಕಿಡ್ನಿ ಸಮಸ್ಯೆ ದೂರವಾಗುತ್ತದೆ. ದೇಹ ತಂಪಾಗುತ್ತದೆ.
ಬಾಳೆ ದಿಂಡು(ಗೊನೆಬಿಟ್ಟ ಮೇಲೆ, ಕಾಂಡದಿಂದ ಪದರುಗಳನ್ನು ತೆಗೆದ ಮೇಲೆ ಸಿಗುವ ಮಧ್ಯದ ಬಿಳಿಭಾಗ) ಸಹ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಬಾಳೆದಿಂಡಿನ ರಸವು ಆಹಾರದಲ್ಲಿನ ಅನೇಕ ಸತ್ವಗಳು ದೇಹ ಸೇರುವಂತೆ ಮಾಡುತ್ತದೆ. ಮೂತ್ರನಾಳದ ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಬಾಳೆ ದಿಂಡಿನ ರಸ ಕುಡಿದಾಗ ದೇಹದಲ್ಲಿನ ಸಕ್ಕರೆ ಅಂಶ ಜಾಸ್ತಿ ಆಗುವುದಿಲ್ಲ. ಜೊತೆಗೆ ರೋಗ ನಿರೋಧಕ ಶಕ್ತಿ ಕೂಡಾ ಹೆಚ್ಚುತ್ತದೆ. ಅಸಿಡಿಟಿ ಇದ್ದವರು ಒಂದು ಕಪ್ ಬಾಳೆಯ ದಿಂಡಿನ ರಸ ಕುಡಿಯಬೇಕು. ಅತಿಯಾದ ಹುಳಿ ತೇಗು, ಬಾಯಿಯಲ್ಲಿ ನೀರೂರುವುದು, ಎಷ್ಟೇ ನೀರು ಕುಡಿದರೂ ಶಮನವಾಗದ ಹೊಟ್ಟೆಯುರಿ, ಹೊಟ್ಟೆ ಹಸಿವಾಗದೆ ಇರುವುದು ಮತ್ತು ಎದೆಯಲ್ಲಿ ಸದಾ ಒತ್ತಿದಂತೆ ಆಗುವುದು ಇಂತಹ ಸಮಸ್ಯೆಗಳಿಗೆ ಬಾಳೆ ದಿಂಡಿನ ರಸ ರಾಮಬಾಣವಾಗಿದೆ. ವರ್ಷಕ್ಕೆ ಮೂರು ನಾಲ್ಕು ಬಾರಿಯಾದರೂ ಬಾಳೆ ದಿಂಡನ್ನು (ಪಲ್ಯ, ರಸ, ಕೋಸಂಬರಿ ಹೀಗೆ ಯಾವ ರೀತಿಯಲ್ಲಾದರೂ)ಸೇವಿಸಬೇಕು. ಇದರಿಂದ ಮೂತ್ರಕೋಶ ಸ್ವಚ್ಛ ವಾಗುತ್ತದೆ. ಇದು ದೇಹದ ಚರ್ಮಕ್ಕೆ ಮತ್ತು ತಲೆಯ ಕೂದಲಿನ ಬೆಳವಣಿಗೆಗೂ ಸಹ ಒಳ್ಳೆಯದು.
ಬಾಳೆ ಎಲೆಗಳನ್ನು ಒಣಗಿಸಿಟ್ಟುಕೊಂಡು ಪುಡಿ ಮಾಡಿಟ್ಟುಕೊಂಡಿದ್ದರೆ ಬಿದ್ದು ಗಾಯಗಳಾದಾಗ, ಸುಟ್ಟ ಗಾಯ ಗಳಾದಾಗ ಮೇಲೆ ಉದುರಿಸಿದರೆ ಶೀಘ್ರವಾಗಿ ಗುಣವಾಗುತ್ತವೆ. ಪುಡಿಯನ್ನು ಮೊಸರಿನಲ್ಲಿ ಕಲೆಸಿ ಮುಖಕ್ಕೆ, ತಲೆ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಕೂದಲು, ಚರ್ಮ ಕಾಂತಿಯುಕ್ತವಾಗುತ್ತದೆ. ಬಾಳೆಹಣ್ಣಿನ ಸಿಪ್ಪೆಯನ್ನು ಬಿಸಾಕದೆ ಮುಖ, ಕೈ ಕಾಲುಗಳಿಗೆ ಚೆನ್ನಾಗಿ ತಿಕ್ಕಿ ಕೊಂಡರೆ ಸನ್ ಬರ್ನ್ ನಿಂದಾದ ಕಲೆಗಳು ವಾಸಿಯಾಗುತ್ತವೆ.
ಬಾಳೆಕಾಯಿಯನ್ನು ತರಕಾರಿಯಂತೆ ಪಲ್ಯ ಮಾಡಿದರೆ ತುಂಬಾ ಒಳ್ಳೆಯದು. ಇತ್ತೀಚೆಗೆ ಬಾಳೆಕಾಯಿಯನ್ನು ಒಣಗಿಸಿ ಪುಡಿ ಮಾಡಿ ಮೈದಾದಂತೆ ಉಪಯೋಗಿಸುತ್ತಿದ್ದಾರೆ. ಸಣ್ಣ ಮಕ್ಕಳಿಗೂ, ವಯಸ್ಸಾದವರಿಗೂ, ಉಪವಾಸ ವ್ರತ ಮಾಡುವವರಿಗೂ ಮಾಲ್ಟ್ ತರಹ ಮಾಡಿ ಕೊಡಬಹುದು. ಶಕ್ತಿಯುತವಾದ ಪೇಯವಾಗುತ್ತದೆ.
ವಿವಿಧ ಜಾತಿಯ ಬಾಳೆಹಣ್ಣುಗಳು ಇದ್ದರೂ ಎಲ್ಲವೂ ಉಪಯುಕ್ತವಾಗಿವೆ.
ಪಂಚಾಮೃತದಲ್ಲಿ, ಪ್ರಸಾದಗಳಲ್ಲಿ ಬಾಳೆಹಣ್ಣನ್ನು ಬಳಸುವ ಉದ್ದೇಶ ಅದು ಒಂದು ಉತ್ಕ್ರಷ್ಟವಾದ ಹಣ್ಣು ಎಂದು. ಉತ್ತಮ ಆರೋಗ್ಯಕ್ಕಾಗಿ ಎಲ್ಲಾ ಕಾಲದಲ್ಲಿ ಸುಲಭವಾಗಿ ಸಿಗುವ ಬಾಳೆಹಣ್ಣನ್ನು ಯಥೇಚ್ಛವಾಗಿ ಬಳಸಿ.
ಮಮತಾ ನಾಗರಾಜ್,
ಪಾರಂಪರಿಕ ವೈದ್ಯೆ,
ದಾವಣಗೆರೆ
ಸಮಾಜದ ಸುಸ್ಥಿತಿಗೆ ಬೇಕಾದುದು ಸಂಸ್ಕೃತಿ.ಅಂತಹ ಆರೋಗ್ಯಕರ ಮೌಲ್ಯ ವಿಚಾರಗಳನ್ನು ದಿನನಿತ್ಯ ಪತ್ರಿಕೆಯ
ಒಡಲೊಳಗೆ ತುಂಬಿ ಜನಮನ ಬೆಳಗುತ್ತಿರುವ ಜನಮಿಡಿತ ನಿಜಕ್ಕೂ ಜನಮಿಡಿತವೇ,,,, 🙏 ಬೆಳಗಲಿ ಬೆಳೆಯಲಿ ಜನಮಿಡಿತ ಮತ್ತಷ್ಟೂ,,, ನಿಮ್ಮ ಮಾನವತಾ ಕಳಕಳಿಯಿಂದ.
ಎಸಿಎಸ್