ಗಿಡಮೂಲಿಕೆ ಒಂದೆಲಗ
ಬ್ರಾಹ್ಮಿ, ಸರಸ್ವತಿ, ಮಂಡೂಕ ಪರ್ಣಿ, ಉರಗೆ ಇತ್ಯಾದಿ ಹೆಸರುಗಳುಳ್ಳ ಒಂದೆಲಗ ಒಂದೇ ಎಲೆಯನ್ನು ಹೊಂದಿರುವ ಪುಟ್ಟ ಸಸ್ಯವಾದರೂ ಅದ್ವಿತೀಯ ಔಷಧೀಯ ಗುಣಗಳನ್ನು ಹೊಂದಿದೆ. ಕೇವಲ ಸಾಂಪ್ರದಾಯಿಕ ವೈದ್ಯರು ಮಾತ್ರವಲ್ಲದೇ ಆಧುನಿಕ ನರರೋಗ ತಜ್ಞರೂ ಬ್ರಾಹ್ಮಿಯ ಮಹತ್ವವನ್ನು ಗುರುತಿಸಿದ್ದಾರೆ. ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚು ಬೆಳೆಯುವ ಈ ಸಸ್ಯವನ್ನು ಇತರೆಡೆಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಈ ಸಸ್ಯದ ಎಲ್ಲಾ ಭಾಗಗಳು ಆರೋಗ್ಯ ರಕ್ಷಕ ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿವೆಯೆಂದು ಪ್ರಾಚೀನ ಕಾಲದಿಂದಲೂ ಹಿರಿಯರು, ಋಷಿಮುನಿಗಳು ಗುರ್ತಿಸಿದ್ದಾರೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಒಂದೆಲಗದ ವಿಶಿಷ್ಟ ರಾಸಾಯನಿಕಗಳು ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿವೆ . ನರರೋಗಗಳಿಗೆ ಇದು ದಿವ್ಯೌಷಧಿಯೆಂದು ಆಯುರ್ವೇದದಲ್ಲಿ ಪರಿಗಣಿಸಿದ್ದಾರೆ. ಕುಗ್ಗಿದ ನರತಂತುಗಳ ವಿಸ್ತರಣೆಗೆ ಬ್ರಾಹ್ಮಿ ಸಹಕಾರಿ ಎಂಬುದನ್ನು ಪ್ರಯೋಗಗಳು ರುಜುವಾತು ಮಾಡಿವೆ.
ಬ್ರಾಹ್ಮಿ ನರರೋಗಗಳಾದ ಮೂರ್ಛೆ ಅಪಸ್ಮಾರ, ಪಾರ್ಕಿನ್ಸ್, ಡಿಮೆನ್ಶಿಯ ಮತ್ತು ಅಲ್ಜಿಮರ್ ನಂಥ ಕಾಯಿಲೆಗಳಿಗೆ ರಾಮಬಾಣವಾಗಿದೆ. ಇದು ನರಕೋಶಗಳನ್ನು ಉತ್ತೇಜಿಸಿ ದೀರ್ಘ ಸ್ಮರಣ ಶಕ್ತಿಗೆ ನೆರವಾಗುತ್ತದೆ. ಒಂದೆಲಗದ ಸೇವನೆ ದೇಹಕ್ಕೂ, ಮನಸ್ಸಿಗೂ ತಂಪು. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ, ಬುದ್ಧಿ ಚುರುಕಾಗುತ್ತದೆ ಮತ್ತು ಮಾತಿನ ಉಗ್ಗುವಿಕೆ ನಿಲ್ಲುವುದು. ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ, ತಂಬುಳಿ ಅಥವಾ ಚಟ್ನಿ ಸೇವಿಸಬೇಕು. ತಲೆಯಲ್ಲಿ ಹೊಟ್ಟು ನಿವಾರಣೆಯಾಗಿ ಕೂದಲು ಚೆನ್ನಾಗಿ ಬೆಳೆಯಲು ಬ್ರಾಹ್ಮಿಯನ್ನು ಹಲವಾರು ರೂಪದಲ್ಲಿ ಬಳಸಲಾಗುತ್ತದೆ. ದಿನನವಿಡೀ ದಣಿದಿದ್ದರೂ ಇದರ ಸೇವನೆಯಿಂದ ಉಲ್ಲಾಸ ಉಂಟಾಗುವುದು. ಹೃದಯದ ಮತ್ತು ಶ್ವಾಸಕೋಶದ ಆರೋಗ್ಯವನ್ನು ಇದು ಕಾಪಾಡುವುದು.
ವಯಸ್ಸಾದವರಲ್ಲಿ ಅಲ್ಜಿಮರ್ ಸಮಸ್ಯೆ ಅತ್ಯಂತ ಅಪಾಯಕಾರಿ. ಇಂತಹವರು ಕೇವಲ ನೆನಪು ಶಕ್ತಿ ಕಳೆದುಕೊಳ್ಳುವುದು ಮಾತ್ರವಲ್ಲದೆ, ಖಿನ್ನತೆ ಹಾಗೂ ಭ್ರಮೆಯಂತಹ ಸಮಸ್ಯೆಗೆ ಒಳಗಾಗುವರು. ಇದನ್ನು ಕಡಿಮೆ ಮಾಡಲು ಬಾಹ್ಮಿಯನ್ನು ಪ್ರತಿನಿತ್ಯವೂ ಸೇವಿಸಬೇಕು. ಆಗ ಮೆದುಳಿನ ಅಂಗಾಂಶಗಳಿಗೆ ಶಕ್ತಿ ದೊರೆತು, ಮಾನಸಿಕ ಒತ್ತಡ ನಿಯಂತ್ರಿತವಾಗಿ, ನರವ್ಯವಸ್ಥೆ ಸುಧಾರಣೆಯಾಗಿ ಖಿನ್ನತೆ ಹಾಗೂ ಆತಂಕ ದೂರವಾಗುತ್ತವೆ.
ಆಘಾತ ಚಿಕಿತ್ಸೆಗೆ ಬ್ರಾಹ್ಮಿ ತುಂಬಾ ಸಹಕಾರಿ ಎಂದು ಹೇಳಲಾಗಿದೆ. ಅಪಸ್ಮಾರದಂತಹ ಸಮಸ್ಯೆಗಳು ಇರುವವರಲ್ಲಿ ಬ್ರಾಹ್ಮಿಯು ಉರಿಯೂತ ನಿಯಂತ್ರಿಸುವುದು ಹಾಗೂ ರಕ್ತದಲ್ಲಿನ ಆಮ್ಲಜನಕವನ್ನು ಉತ್ತಮಪಡಿಸುವುದು.
ರೋಗ ಬಂದ ಮೇಲೆ ಒದ್ದಾಡುವುದಕ್ಕಿಂತ ಮೊದಲೇ ಜಾಗರೂಕರಾಗಿರುವುದು ಒಳ್ಳೆಯದು. ಅದಕ್ಕಾಗಿ ಇದನ್ನು ನಿತ್ಯ ಆಹಾರಕ್ರಮದಲ್ಲಿ ಬಳಸುವುದು ಉತ್ತಮ.
ಮಮತಾ ನಾಗರಾಜ್
ಪಾರಂಪರಿಕ ವೈದ್ಯೆ,
ದಾವಣಗೆರೆ.