ಗಿಡಮೂಲಿಕೆ ಎಕ್ಕ

ಎಕ್ಕವನ್ನು ಹಿಂದೂಗಳು ದೈವೀಕ ಗಿಡವೆಂದು ಕರೆದರೂ ಅವರಾಗೇ ಬೆಳೆಸುವುದಿಲ್ಲ. ಎಲ್ಲೆಂದರಲ್ಲಿ ತಾನಾಗೇ ಬೆಳೆಯುವ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ, ಪೂಜೆಗೂ ಉಪಯೋಗಿಸಲ್ಪಡುವ ಈ ಸಸ್ಯದ ಬಗ್ಗೆ ಎಲ್ಲರಿಗೂ ಸಂಪೂರ್ಣ ತಿಳಿವಳಿಕೆ ಇಲ್ಲ. ಆದರೆ ಭಯಭಕ್ತಿ ಇದೆ. ಸೂರ್ಯನು(ಅದಕ್ಕೆ ಅರ್ಕ ಎಂದು ಈ ಗಿಡದ ಇನ್ನೊಂದು ಹೆಸರು) ಈ ಗಿಡದ ಅಧಿಪತಿ. ಇದನ್ನು ತಂತ್ರ ವಿದ್ಯೆ ಕಲಿತವರು ಬಹಳವಾಗಿ ಉಪಯೋಗಿಸುತ್ತಾರೆ. ಹಲವಾರು ನಂಬಿಕೆ, ಮೂಢನಂಬಿಕೆಗಳು ಈ ಗಿಡದ ಬಗ್ಗೆ ಪ್ರಚಲಿತದಲ್ಲಿದ್ದು, ವೈದ್ಯಕೀಯವಾಗಿ ಸರಿಯಾಗಿ ಬಳಸಿದಲ್ಲಿ ಉತ್ತಮ ಫಲಿತಾಂಶ ಕೊಡುವ ರಹಸ್ಯಮಯ ಗಿಡವಾಗಿದೆ.

ಎಕ್ಕದ ಹಾಲು ಕಣ್ಣಿಗೆ ಬಿದ್ದರೆ ತುಂಬಾ ಅಪಾಯ. ಆದ್ದರಿಂದ ಹೂ ಕೀಳುವಾಗ ತುಂಬಾ ಜಾಗ್ರತೆ ವಹಿಸಿರಿ. ಅಕಸ್ಮಾತ್ ಕಣ್ಣಿಗೆ ಹಾಲು ಬಿದ್ದರೆ ಪ್ರಥಮ ಚಿಕಿತ್ಸೆಯಾಗಿ ತಕ್ಷಣ ವಿಭೂತಿ ಪುಡಿಯನ್ನು ಹಾಕಿ ಹಾಗೂ ಗೋಮೂತ್ರದಿಂದ ತೊಳೆಯಬೇಕು. ಕಣ್ಣು ಉಜ್ಜಬೇಡಿ. ಡಾಕ್ಟರ್ ಬಳಿ ಚಿಕಿತ್ಸೆ ಮಾಡಿಸಿ. ಮಕ್ಕಳಿಗೂ ಇದರ ಬಗ್ಗೆ ತಿಳಿವಳಿಕೆ ನೀಡಿರಿ.

ನೇರಳೆ ಛಾಯೆ ಬಣ್ಣದ ಹೂ ಬಿಡುವ ಗಿಡಕ್ಕಿಂತ ಬಿಳಿ ಎಕ್ಕವನ್ನು ದೈವಿಕ ಕಾರ್ಯಗಳಲ್ಲಿ ಬಳಸುತ್ತಾರೆ. ಗಣಪತಿಗೆ ಬಿಳಿ ಎಕ್ಕ ತುಂಬಾ ಪ್ರೀತಿ ಎನ್ನುವುದು ನಂಬಿಕೆ. ಬಿಳಿ ಎಕ್ಕದ ಗಿಡದ ಬೇರಿನಲ್ಲಿ ಗಣಪತಿ ರೂಪ ಒಡಮೂಡಿರುತ್ತದೆ, ಗಣಪತಿ ವಾಸಿಸುತ್ತಾನೆ ಎಂಬ ಪ್ರತೀತಿ ಇದೆ. ಹೀಗಾಗಿ ಈ ಗಿಡ ಮನೆಯ ಬಳಿ ಬೆಳೆದಾಗ, ಬೇಡದಿದ್ದರೂ ಕಿತ್ತು ಹಾಕಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಗಣಪತಿ ರೂಪದ ಬೇರು ಇರುವುದಿಲ್ಲ. 4-5 ವರ್ಷದ ಹಳೆಯ ಬೇರಿನಿಂದ ಗಣಪತಿ ಪ್ರತಿಮೆ ಮಾಡುತ್ತಾರೆ.

ಎಕ್ಕದ ಬೇರು, ಬೇರಿನ ತೊಗಟೆ, ಎಲೆ, ಹಾಲಿನಂತಹ ದ್ರವ ಮತ್ತು ಹೂಗಳು ಹೀಗೆ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದೆ.

ಎಕ್ಕದ ಎಲೆಯನ್ನು ದೇಹದ ಸರ್ವಾಂಗಗಳಿಗೆ ಸ್ಪರ್ಶಿಸಿ, ಸ್ನಾನ ಮಾಡಿದರೆ ಮೂಳೆ ನೋವು ನಿವಾರಣೆ ಆಗುವುದು. ಈ ಕಾರಣಕ್ಕಾಗಿಯೇ ರಥಸಪ್ತಮಿ ದಿನ ಎಕ್ಕದ ಎಲೆಯ ಸ್ನಾನ ಮಾಡುವುದು.

ಎಕ್ಕವನ್ನು ವಾತನಿವಾರಣೆಗೆ, ಯಕೃತ್ತು ದೋಷ ನಿವಾರಣೆಗೆ, ಉದರ ಸಂಬಂಧಿ ಖಾಯಿಲೆಗಳಿಗೆ ಬಳಸುತ್ತಾರೆ. ಎಕ್ಕದ ಹಾಲನ್ನು ಮೂಲವ್ಯಾಧಿಯ ನಿವಾರಣೆಯಲ್ಲಿ ಬಳಸುತ್ತಾರೆ.

ಮಹಿಳೆಯರ ಬಿಳಿ ಸೆರಗಿನ ದೋಷಕ್ಕೆ ಬಿಳಿ ಎಕ್ಕದ ಹೂವು ಪರಿಣಾಮಕಾರಿಯಾದ ಚಿಕಿತ್ಸೆ ಯಾಗಿದೆ. ಮಾಸಿಕ ಋತುಸ್ರಾವದಲ್ಲಿ ಏರುಪೇರಾಗುತ್ತಿದ್ದರೆ ಅಥವಾ ಅನಿಯಮಿತವಾಗಿದ್ದಲ್ಲಿ ಎಕ್ಕದ ಹೂವು, ಬೆಲ್ಲ ಸೇರಿಸಿ, ಅರೆದು ಗುಳಿಗೆ ಮಾಡಿಕೊಂಡು, ದಿನಕ್ಕೆ 3–4 ಮಾತ್ರೆಯಂತೆ ಸೇವಿಸುವುದು ಉತ್ತಮ. ಬಿಳಿ ಎಕ್ಕದ ಎಲೆಯ ಕಷಾಯ ಸೇವಿಸಿದರೆ ಹೊಟ್ಟೆ ನೋವು ಶಮನವಾಗುವುದು.

ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೆಹಣ್ಣಿನ ರಸದಲ್ಲಿ ಅರೆದು ಸೇವಿಸಿದರೆ ಉಪಶಮನವಾಗುತ್ತದೆ. ಅಜೀರ್ಣವಿದ್ದರೆ ಎಕ್ಕದ ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು ಅಥವಾ ಎಕ್ಕದ ಬೇರಿನ ಭಸ್ಮವನ್ನು ಪ್ರತಿ ಬೆಳಿಗ್ಗೆ ಮತ್ತು ರಾತ್ರಿ ಜೇನುತುಪ್ಪದೊಂದಿಗೆ ಸೇವಿಸಬಹುದು. ಚರ್ಮದ ಕಾಯಿಲೆ ಇದ್ದರೆ ಬಿಳಿ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಲಾಗುತ್ತದೆ. ಕ್ರಿಮಿಯುಕ್ತವಾದ ಕುಷ್ಠ, ಹುಣ್ಣುಗಳನ್ನು ಸಹ ವಾಸಿ ಮಾಡಬಹುದು. ಕ್ರಿಮಿಕೀಟಗಳು, ಕಜ್ಜಿ, ಊತ, ಉರಿ ಬಾಧಿಸುತ್ತಿದ್ದರೆ ಇದರ ಹಾಲನ್ನು ಅದರ ಮೇಲೆ ಲೇಪಿಸಿದರೆ ಉಪಶಮನವಾಗುತ್ತದೆ. ಚೇಳು ಕಡಿದರೆ, ಬೇರೆ ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿಣದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುವುದು. ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ. ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಖ ಕೊಟ್ಟರೆ  ಕೆಲವೇ ದಿನದಲ್ಲಿ ನೋವು ಶಮನವಾಗುತ್ತದೆ. ಪುಡಿ ಮಾಡಿದ ಒಣಗಿದ ಎಕ್ಕದ ತೊಗಟೆಯನ್ನು  ಜೇನುತುಪ್ಪದೊಂದಿಗೆ ತಿಂದರೆ ಕೆಮ್ಮು, ನೆಗಡಿ, ಕಫ ಕಡಿಮೆಯಾಗುತ್ತದೆ.

ಮುಖದಲ್ಲಿ ಭಂಗು ಬಂದಿದ್ದರೆ ಇದರ ರಸ ಲೇಪಿಸಬೇಕು. ಹಲ್ಲು ನೋವಿಗೂ ಬಿಳಿ ಎಕ್ಕದ ರಸ ಒಳ್ಳೆಯ ಔಷಧ. ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಹುದು.

ಮೂತ್ರ ಕಟ್ಟಿದ್ದಲ್ಲಿ ಎಕ್ಕದ ಎಲೆಗಳನ್ನು ಒಣಗಿಸಿ ನಯವಾದ ಪುಡಿಮಾಡಿಟ್ಟುಕೊಂಡು ಬಿಸಿನೀರಿನಲ್ಲಿ ಬೆರೆಸಿ ಕುಡಿಸುವುದರಿಂದ ಮೂತ್ರವಿಸರ್ಜನೆ ಸುಗಮವಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಸಾಕುಪ್ರಾಣಿಗಳ(ನಾಯಿ, ಹಸು, ಎತ್ತು) ಬೆನ್ನು ಮೇಲೆ ಗಾಯವಾದಾಗ ನೊಣಗಳು ಕುಳಿತು ಮೊಟ್ಟೆ ಇಡುತ್ತವೆ(ಇಪ್ಪೆ ಇಡುವುದು). ಸಣ್ಣ ಗಾಯ ವ್ರಣವಾಗಿ, ಹುಳುಗಳು ತುಂಬಿ ಮೂಕ ಪ್ರಾಣಿಗಳಿಗೆ ತುಂಬಾ ತೊಂದರೆ ಯಾಗುತ್ತದೆ. ಆಗ ಆ ಗಾಯಗಳಿಗೆ ಎಕ್ಕದ ಹಾಲು ಹಾಕಿದರೆ ಎರಡೇ ಸಲಕ್ಕೇ ವಾಸಿಯಾಗುತ್ತದೆ. ಹುಳುಗಳು ಸಾಯುತ್ತವೆ. ಈ ಎಕ್ಕವನ್ನು ಬಳಸಿ ಮುಂದೆ ಜ್ವರ ಬರದ ಹಾಗೆಯೂ ನಾಟಿ ವೈದ್ಯರು ಔಷಧ ಮಾಡಬಲ್ಲರು.

ಈ ಗಿಡಮೂಲಿಕೆಯನ್ನು ಪೂಜೆಯ ಜೊತೆಗೆ ಮನೆಮದ್ದಾಗಿ ಬಳಸಿ.

ಮಮತಾ ನಾಗರಾಜ್,
ಪಾರಂಪರಿಕ ವೈದ್ಯೆ,
ದಾವಣಗೆರೆ.

Leave a Reply

Your email address will not be published. Required fields are marked *