ಕೃಷ್ಣನ ಫೋಟೋ…!! ಒಂದು ಮಾರ್ಮಿಕ ಕಥೆ
ಒಬ್ಬರು ಮುದುಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ತಲುಪುವ ಸ್ಥಳಕ್ಕೆ ಸರಿಯಾದ ಟಿಕೆಟ್ ಪಡೆದಾಗಿತ್ತು. ಸ್ವಲ್ಪ ಹೊತ್ತಿನ ನಂತರ ಅವರ ಕೈಯಿಂದ ಪರ್ಸ್ ಅಚಾನಕ್ಕಾಗಿ ಕೆಳಗೆ ಬಿತ್ತು..!
ತುಂಬಾ ಪ್ರಯಾಣಿಕರು ರೈಲಿನಲ್ಲಿ ಇದ್ದರು. ಒಬ್ಬ ವ್ಯಕ್ತಿಗೆ ಆ ಪರ್ಸ್ ದೊರಕಿತು. ಅವರು ಸಭ್ಯತೆಯಿಂದ ಆ ಪರ್ಸ್ ಅನ್ನು ಎಲ್ಲರಿಗೂ ಕಾಣುವಂತೆ ಎತ್ತಿ ಹಿಡಿದು ಗಟ್ಟಿಯಾಗಿ ಕೂಗಿ ಕೇಳಿದರು “ನನಗೆ ಈ ಪರ್ಸ್ ಸಿಕ್ಕಿದೆ. ಇದು ಯಾರದ್ದೋ ಅವರು ದಯಮಾಡಿ ಪಡೆದುಕೊಳ್ಳಿ”.
ಆ ಮುದುಕರು ಕುಳಿತಲ್ಲಿಂದಲೇ ಹೇಳಿದರು “ಮಹನೀಯರೇ ಅದು ನನ್ನದು ದಯಮಾಡಿ ಕೊಡಿ” ಎಂದರು.
ಅದಕ್ಕಾತ “ಸ್ವಾಮಿ ಇಷ್ಟು ಮಂದಿಯಿದ್ದಾರೆ. ಹಾಗಿರುವಾಗ ಅದು ನಿಮ್ಮದೇ ಎಂದು ಹೇಗೆ ಹೇಳುತ್ತೀರಿ !?” ಎಂದು ಮರು ಪ್ರಶ್ನಿಸಿದ.
ಅದಕ್ಕೆ ಆ ಮುದುಕರೆಂದರು “ಅಯ್ಯಾ! ಮಹನೀಯರೇ ಆ ಪರ್ಸಿನೊಳಗೆ ಶ್ರೀ ಕೃಷ್ಣನ ಒಂದು ಫೋಟೋ ಇದೆ. ಬೇಕಾದರೆ ಪರಿಶೀಲಿಸಿ ನೋಡಿ. ಒಂದು ವೇಳೆ ಫೋಟೋ ಇಲ್ಲದಿದ್ದರೆ ಅದನ್ನು ನನಗೆ ಕೊಡಬೇಡಿ..!!”
ಆ ವ್ಯಕ್ತಿ ಪರಿಶೀಲಿಸಿದಾಗ ನಿಜಕ್ಕೂ ಅದರೊಳಗೆ ಕೃಷ್ಣನ ಒಂದು ಸುಂದರವಾದ ಫೋಟೋ ಇತ್ತು! ಆ ವ್ಯಕ್ತಿ ಮರುಮಾತನಾಡದೇ ಆ ಪರ್ಸ್ ಅನ್ನು ಆ ಮುದುಕರಿಗೆ ಹಿಂದುರುಗಿಸಿದರು.
ಇದನ್ನೆಲ್ಲಾ ನೋಡುತ್ತಿದ್ದ ಅಲ್ಲಿ ಟಿಕೆಟ್ ಕೊಡುವ ಟಿಸಿಯೊಬ್ಬರು ಹಾಗೇ ಸುಮ್ಮನೆ ಆ ಮುದುಕರ ಬಳಿ ಕೇಳಿದರು “ಸ್ವಾಮಿ ಸಾಮಾನ್ಯವಾಗಿ ಎಲ್ಲರೂ ತಮ್ಮ ತಮ್ಮ ಪರ್ಸಿನಲ್ಲಿ ತಮ್ಮದೇ ಫೋಟೋ ಅಥವಾ ತಮ್ಮ ಹೆಂಡತಿ ಮಕ್ಕಳ ಫೋಟೋ ಇಟ್ಟುಕೊಂಡಿರುತ್ತಾರೆ. ಆದರೆ, ನೀವು ಕೃಷ್ಣನ ಫೋಟೋ ಇಟ್ಟುಕೊಂಡಿರುವಿರಲ್ಲಾ ಏಕೆ!? ಕಾರಣವೇನು!?”
ಅದಕ್ಕೆ ಆ ಮುದುಕರ ಉತ್ತರ ಹೀಗಿತ್ತು …. “ಸ್ವಾಮಿ ನಾನು ಬಾಲ್ಯದಲ್ಲಿ ಇರುವಾಗ ನನ್ನ ಹೆತ್ತವರ ಫೋಟೋ ಇಟ್ಟುಕೊಂಡೆ. ನನಗೆ ಸ್ವಲ್ಪ ಯುವ ಪ್ರಾಯವಾದಾಗ ಅದನ್ನು ತೆಗೆದು ನನ್ನ ಫೋಟೋ ಇಟ್ಟುಕೊಂಡೆ. ಹಾಗೇ ನನಗೆ ಮದುವೆಯಾಯ್ತು, ಆಗ ನಾನು ನನ್ನ ಪ್ರೀತಿಯ ಹೆಂಡತಿಯ ಫೋಟೋ ಇಟ್ಟುಕೊಂಡೆ. ಮುಂದೆ ಓರ್ವ ಮಗ ಹಾಗೂ ಮಗಳು ಹುಟ್ಟಿದರು, ಹೆಂಡತಿಯ ಫೋಟೋ ತೆಗೆದು ನನ್ನ ಪ್ರೀತಿಯ ಎರಡು ಮಕ್ಕಳ ಫೋಟೋ ಇಟ್ಟುಕೊಂಡೆ. ಮುಂದೆ ಹೆತ್ತವರು ತೀರಿಕೊಂಡರು. ಮಕ್ಕಳು ಬೆಳೆದು ದೊಡ್ಡವರಾಗಿ ಮದುವೆಯಾದರು. ಜೊತೆಗೆ ನಾನು ಮುದುಕನಾಗುತ್ತಾ ಬಂದೆ. ಹೆಂಡತಿ ಕೂಡ ತೀರಿಕೊಂಡಳು. ನನ್ನ ಮಕ್ಕಳು ಈಗ ಅವರವರ ಸಂಗಾತಿಯ ಫೋಟೋ ಇಟ್ಟುಕೊಂಡಿರಬಹುದು..!
ನನ್ನ ಮಕ್ಕಳು ನನ್ನನ್ನು ಮನೆಯಿಂದ ಹೊರಹಾಕಿದರು! ನನಗೆ ಆಗ ಜ್ಞಾನೋದಯ ಆಯ್ತು. ನಾನು ಎಂಥಾ ತಪ್ಪು ಮಾಡಿದೆ! ಈ ಸಂಸಾರ ಕೇವಲ ಕ್ಷಣ ಭಂಗುರದ ಆಟ. ಎಲ್ಲವೂ ದೇವರ ಮಾಯೆಯ ಆಟ. ನಾನು ಬಾಲ್ಯದಲ್ಲಿಯೇ ಕೃಷ್ಣನ ಫೋಟೋ ಇಟ್ಟುಕೊಳ್ಳಬೇಕಿತ್ತು..!! ನಾವು ಯಾರನ್ನು ಅತೀ ಹೆಚ್ಚು ಪ್ರೀತಿಸುತ್ತೇವೋ ಅವರ ಫೋಟೋ ಇಟ್ಟುಕೊಳ್ಳುತ್ತೇವೆ ಅಲ್ಲವೇ..!?
ಹಾಗಾಗಿ ನಾನು ನನ್ನ ಬಾಲ್ಯ, ಯೌವ್ವನ, ಮದ್ಯ ವಯಸ್ಸನ್ನೆಲ್ಲಾ ಕೃಷ್ಣನನ್ನು ಮರೆತು ಸಂಸಾರದ ಮೋಹದೊಳಗೆ ಬಂಧಿಯಾಗಿ ವ್ಯರ್ಥವಾಗಿ ಕಳೆದೆ. ಆದರೆ, ನಾನವನನ್ನು ಮರೆತರೂ ಅವನು ಮಾತ್ರ ನನ್ನ ಮರೆಯದೇ ಪ್ರೀತಿಯಿಂದ ಸಲಹಿದ. ಈಗಲೂ ಸಲಹುತ್ತಿರುವ. ಕನಸಲ್ಲೂ ದರ್ಶನ ನೀಡಿದ! ಈಗ ಕೃಷ್ಣನ ಹೊರತು ಯಾರನ್ನು ಕೂಡಾ ನಾನು ಪ್ರೀತಿಸುತ್ತಿಲ್ಲಾ. ಹಾಗಾಗಿ ನನ್ನ ಪರ್ಸಿನಲ್ಲಿ ಅವನ ಫೋಟೋ ಹೊರತಾಗಿ ಬೇರೆ ಯಾರದ್ದೂ ಇಟ್ಟುಕೊಂಡಿಲ್ಲ. ಅವನು ಕರೆದೊಯ್ಯುವವರೆಗೆ ಅವನ ಸ್ಮರಣೆ ಹಾಗೂ ಸೇವೆಯಲ್ಲಿರುವೆ”.
“ಅಂದ ಹಾಗೆ ನಿಮ್ಮ ಪರ್ಸಿನಲ್ಲಿ ಈಗ ಯಾರ ಫೋಟೋ ಇದೆ..!!? “
ಇದನ್ನೆಲ್ಲಾ ಮನಸ್ಸಿಟ್ಟು ಕೇಳಿದ ಟಿಸಿ ಹಾಗೂ ಅಲ್ಲಿನ ಪ್ರಯಾಣಿಕರ ಮುಖವೆಲ್ಲಾ ಬಿಳುಚಿಕೊಂಡಿತ್ತು !!
ಹಾಗೂ ಯಾರೊಬ್ಬರೂ ಉತ್ತರಿಸದೇ ಕೇವಲ ಆ ಮುದುಕರಿಗೆ ಕೈಮುಗಿದರು..!
ನನ್ನ ಪ್ರೀತಿಯ ಬಂಧುಗಳೇ… ಬದುಕು ಎಂಬುದು ಕ್ಷಣಿಕ. ಬರುವಂತಹ ಪ್ರತಿಯೊಬ್ಬರೂ… ಅವರರವರ ಪಾತ್ರ ಮುಗಿದಾಗ ಭೂಮಿಯ ಮೇಲಿನ ಋಣ ತೀರಿತೆಂದು ಹೊರಡಲೇ ಬೇಕು. ಆದರೂ, ನಾವು ಮಾನವರು ಈ ಕ್ಷಣಿಕ ಬದುಕಿನಲ್ಲಿ ನಾನು, ನನ್ನದು, ನನ್ನವರು ಎಂಬೆಲ್ಲ ಮೋಹದಿಂದ ಬದುಕುತ್ತೇವೆ. ಬರುವಾಗ ಒಂಟಿಯಾಗಿ ಬಂದು… ಹಾಗೆ ಒಂಟಿಯಾಗಿ ತೆರಳುವ ಮಾನವನ ಬಾಳಿನಲ್ಲಿ ಬರುವ ಎಲ್ಲಾ ಸಂಬಂಧಗಳು ಆ ದೇವರ ಅನುಗ್ರಹ. ಸುಖಕ್ಕೆ ಹಿಗ್ಗದೆ… ದುಃಖಕ್ಕೆ ಕುಗ್ಗದೆ… ಬಂದದ್ದೆಲ್ಲವೂ ಕೃಷ್ಣನಿಗೆ ಅರ್ಪಣೆ ಮಾಡಿ ನಗುತ್ತಾ ಈ ಅಲ್ಪ ಜೀವನವನ್ನು ಸಾರ್ಥಕಗೊಳಿಸೋಣ.
ಈಗ ಹೇಳಿ ನಿಮ್ಮ ನಿಮ್ಮ ಪರ್ಸು, ಬ್ಯಾಗು, ಮೊಬೈಲ್ ಇತ್ಯಾದಿಗಳಲ್ಲಿ ಯಾರ ಫೋಟೋ ಇದೆ..!!!???
ನನ್ನ ಕಾಲೇಜು ದಿನಗಳಲ್ಲಿ ನಾನು ಕೇಳಿದ ಕಥೆ ನೆನಪಾಗಿ ನಿಮ್ಮೊಂದಿಗೆ ಹಂಚಿಕೊಂಡೆ…
ಕಾಯುವವನಾರು ಕೃಷ್ಣನಲ್ಲದೇ…
ವಂದನೆಗಳು
ನಿಮ್ಮೊಳಗೊಬ್ಬ ಜೀವಿ