ಕಿತ್ತೂರು ರಾಣಿ ಚನ್ನಮ್ಮನ ಖಡ್ಗ ದೇಶಕ್ಕೆ ಮರಳಿ ತರಬೇಕು – ಸ್ಮಾರಕಗಳನ್ನು ರಕ್ಷಿಸಬೇಕು

( ಅಕ್ಟೋಬರ್ 23 ರಾಣಿ ಚನ್ನಮ್ಮ ಜಯಂತಿ ಪ್ರಯುಕ್ತ ಈ ಲೇಖನ )

                ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪೂರ್ವದಲ್ಲಿ ಬ್ರಿಟಿಷರ ನರ ನಾಡಿಯಲ್ಲಿ ಭಯ ಹುಟ್ಟಿಸಿದ ಒಂದು ಚಿಕ್ಕ ಸಂಸ್ಥಾನದ ಮಹಾ ರಾಣಿಯೆ ಚನ್ನಮ್ಮಳಾಗಿದ್ದಾಳೆ. 1824 ರ ಕಿತ್ತೂರು ಯುದ್ಧದಲ್ಲಿ ದೇಶ ದ್ರೋಹಿಗಳ ಕುತಂತ್ರಕ್ಕೆ ಮೋಸ ಹೋಗಿ ಕಿತ್ತೂರು ಬ್ರಿಟಿಷರ ವಶವಾಯಿತು. ಆಗ ರಾಣಿ ಚನ್ನಮ್ಮನನ್ನು ಬಂಧಿಸಿ ಬೈಲುಹೊಂಗಲದ ಜೈಲಿನಲ್ಲಿ ಸೊಸೆಯಂದಿರೊಂದಿಗೆ ಇಡಲಾಯಿತು. ಆಗ ಅಂದಿನ ಬ್ರಿಟಿಷ್ ಅಧಿಕಾರಿ ಚಾಪ್ಲಿನ್ ಕಿತ್ತೂರು ಕೋಟೆ ಕೊಳ್ಳೆ ಹೊಡಸಿದ ನಂತರ ಕೋಟೆ ಪಿರಂಗಿಯಿಂದ ಉಡಾಯಿಸಿದ. ಚನ್ನಮ್ಮನ ಬಂಧನದ ನಂತರ ಜೊತೆಗಿದ್ದ ಖಡ್ಗ, ಕಟಾರಿ, ಕುರಾಣಿ ಮತ್ತು ಹಲವಾರು ಯುದ್ಧ ಸಲಕರಣಿ ಅಸ್ತ್ರಗಳನ್ನು ತಮ್ಮ ವಶಕ್ಕೆ ಪಡೆದರು. ಮತ್ತು ಖಡ್ಗದ ಜೊತೆಗೆ ಸ್ವತಃ ರಾಣಿ ಚನ್ನಮ್ಮನನ್ನು ಬೈಲುಹೊಂಗಲದಲ್ಲಿ ಇಡಲಾಯಿತು. ಆದ್ದರಿಂದ ಈ ರಾಣಿ ಮಹಾ ಪರಾಕ್ರಮ ಇಂಗ್ಲೆಂಡ್ ರಾಣಿಯ ಮನಸ್ಸು ಕೆದಕಿತು. ಆದ್ದರಿಂದ ಅಂದಿನ ಕಂಪನಿ ಸರಕಾರ ಬ್ರಿಟಿಷರ ವಿರುದ್ಧ ಬಳಸಿದ ಯುದ್ಧಾಸ್ತ್ರ ಕಬಳಿಸುವ ಮತ್ತು ಶಸ್ತ್ರಾಸ್ತ್ರ ಅಧಿನತೆಗೆ ತೆಗೆದುಕೊಳ್ಳುತ್ತಿದ್ದರು. ಚನ್ನಮ್ಮನ ಖಡ್ಗ ಇಷ್ಟೊಂದ
ಬ್ರಿಟಿಷ್ ಹೆಣಗಳ ರಾಶಿ ಕೆಡವಿದ್ದರಿಂದ ರಾಣಿ ಚನ್ನಮ್ಮನ ಖಡ್ಗ ಹೆಸರಾಗಿತ್ತು. ಆದ್ದರಿಂದ ಚನ್ನಮ್ಮನ ಖಡ್ಗ ಇಂಗ್ಲೆಂಡ್ ದೇಶಕ್ಕೆ ರಾಣಿಯ  ಮರಣದ ನಂತರ ಸಾಗಿಸಲಾಯಿತು. ಅಂತಾ ಉಹಾಪೊಹ ಸಾಕ್ಷಿಗಳಿವೆ ಮತ್ತು ಸಂಶಯವಿದೆ. 

                    ರಾಣಿ ಚನ್ನಮ್ಮನ ಖಡ್ಗ ವಂಶಸ್ಥರಿಗೆ ಮರಳಿಸಿದರೆ ಸ್ವಾತಂತ್ರ್ಯದ ಕನಸಿಗೆ ರೆಕ್ಕೆ ಬರುತ್ತದೆ. ಮತ್ತು ಭಾರತ ಸ್ವಾತಂತ್ರ್ಯದ ಸ್ಪೂರ್ತಿಗೆ ಕ್ರಾಂತಿಕಾರಿಗಳು ಸಿದ್ದರಾಗುತ್ತಾರೆ ಅಂತಾ ವಂಶಸ್ಥರಿಗೆ, ಸಂಗೋಳ್ಳಿ ರಾಯನ ಬಂಟರಿಗೆ ಮರಳಿಸದೆ ಖಡ್ಗ ಭೂಗತ ಮಾಡಿ ಲಂಡನ್ ವಸ್ತು ಸಂಗ್ರಹಾಲಯದಲ್ಲಿ ಇಟ್ಟಿರಬೇಕು ಅನಿಸುತ್ತದೆ. ಮೊದಲೆ ಬ್ರಿಟಿಷರು ವ್ಯಾವಹಾರಿಕ ನಿಪುಣರು ಇವರು ವಸ್ತುಗಳನ್ನು ಆದಾಯವಾಗಿ ಬದಲಿಸುವಂತವರಾಗಿದ್ದಾರೆ.ವಿಶ್ವದ ಅನೇಕ ದೇಶಗಳಲ್ಲಿ ಸಾಮ್ರಾಜ್ಯ ಸ್ಥಾಪಿಸಿದವರು. ಇವರು ಅನೇಕ ಬಾರಿ ಚನ್ನಮ್ಮನ ಖಡ್ಗ ನಮ್ಮ ಹತ್ತಿರ ಇಲ್ಲಾ ಅಂತಾ ಭಾರತ ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದ್ದಾರೆ. ಆದರೆ ಖಡ್ಗ ಶತಮಾನ, ದ್ವಿಶತಮಾನ, ತ್ರಿಶತಮಾನ ಹೀಗೆ ಸಮಯ ಕಳೆದಾಗ ವಿಶೇಷ ದಿನ ನೋಡಿ ನಿಮ್ಮ ಚನ್ನಮ್ಮನ ಖಡ್ಗ ಇದೆ ಅಂತಾ ಹರಾಜಿಗೆ ಇಟ್ಟು ಕೊಟ್ಯಾಂತರ ರೂಪಾಯಿ ಹರಾಜಿನ ಹಣ ಗಳಿಸಿ ದೇಶಕ್ಕೆ ಆದಾಯ ಮಾಡಿಕೊಳ್ಳುತ್ತಿದ್ದಾರೆ.ಆದ್ದರಿಂದ ಹೆಚ್ಚು ಬೇಡಿಕೆ ಬರಲಿ ಅಂತಾ ಚನ್ನಮ್ಮನ ಖಡ್ಗ ಇಟ್ಟುಕೊಂಡಿರಬಹುದು.

                       ವಿಶ್ವದ ಅನೇಕ ಬ್ರಿಟಿಷ್ ವಿರೋಧಿಗಳ ಖಡ್ಗ, ವಸ್ತು, ಆಭರಣ, ಸಿಂಹಾಸನ ಮತ್ತು ಆಡಳಿತಾತ್ಮಕ ಸಾಮಗ್ರಿಗಳನ್ನು ಬ್ರಿಟಿಷರು ಯುದ್ಧದಲ್ಲಿ ಇಟ್ಟುಕೊಂಡಿದ್ದಾರೆ. ಅವುಗಳನ್ನು ಕಾಲ ಕಳೆದಂತೆ ಆದಾಯದ ಮೂಲವಾಗಿ ಮಾರಿದ್ದಾರೆ. ಅಂದರೆ ಇವರ ಕಸುಬೇ ವ್ಯವಹಾರವಾಗಿರುವಾಗ ಚನ್ನಮ್ಮನ ಖಡ್ಗ ಖಂಡಿತಾ ಲಂಡನ್ ವಸ್ತು ಸಂಗ್ರಹಾಲಯದಲ್ಲಿ ಇದೆ ಅಂತಾ ಅನಿಸುತ್ತದೆ. ಇವರು ಸ್ವಾತಂತ್ರ್ಯ ಪೂರ್ವದ ಭಾರತೀಯರು ಅಂತಾ ಯಾಮಾರಿಸುತ್ತಿದ್ದಾರೆ. 1799 ರ ಆಂಗ್ಲೊ – ಮೈಸೂರು ಇಂಡಿಯನ್ ಯುದ್ಧದಲ್ಲಿ ಮಡಿದ ಟಿಪ್ಪು ಸುಲ್ತಾನ್ ಖಡ್ಗವಿದೆ ಅಂದರೆ 1824 ರಲ್ಲಿನ ಚನ್ನಮ್ಮನ ಖಡ್ಗ ಖಂಡಿತಾ ಇಂಗ್ಲೆಂಡನಲ್ಲೇ ಇದೆ. ಇದನ್ನು ತರುವ ಪ್ರಯತ್ನ ಮಾಡಬೇಕು.

-: ಚನ್ನಮ್ಮನ ಖಡ್ಗ ತರುವಲ್ಲಿ ತಾರತಮ್ಯ :-

              ಕೊಹಿನೂರು ವಜ್ರ, ಮಹಾತ್ಮಾ ಗಾಂಧೀಜಿಯ ಪಾದರಕ್ಷೆಗಳು, ಕನ್ನಡಕ, ಕೋಲು ತಟ್ಟೆ ಇತ್ಯಾದಿ ವಸ್ತುಗಳನ್ನು ಕೊಟ್ಯಾಂತರೂಪಾಯಿ ಖರ್ಚು ಮಾಡಿ ಭಾರತಕ್ಕೆ ತರಲಾಯಿತು. ಟಿಪ್ಪು ಸುಲ್ತಾನ್ ಖಡ್ಗವನ್ನು 1ಕೋಟಿ 57 ಲಕ್ಷ ರೂ ನೀಡಿ ಖಾಸಗಿ ವ್ಯಕ್ತಿ ಮಧ್ಯ ದೊರೆ ವಿಜಯ ಮಲ್ಯ ದೇಶಕ್ಕೆ ತಂದರು. ಇಂಡೋನೇಷಿಯಾದ ಬಾಲಿಯಲ್ಲಿನ ಸಪ್ತಮಾತ್ರಿಕೆ, ಬರ್ಮಾದಿಂದ ಬುದ್ಧನ ವಿಗ್ರಹ, ಶ್ರೀಲಂಕಾದಿಂದ ಮಹಾವೀರ ಇತ್ಯಾದಿ ಸ್ಮರಣಿಕೆಗಳನ್ನು ಮತ್ತು ಐತಿಹಾಸಿಕ ಸಾಮಗ್ರಿ ಕೊಟ್ಯಾಂತರೂಪಾಯಿ ಖರ್ಚು ಮಾಡಿ ಭಾರತೀಯ ವಿದೇಶಾಂಗ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರಕಾರ ಅನೇಕ ದೇಶದಲ್ಲಿನ ಭಾರತೀಯರ ವಸ್ತುಗಳನ್ನು ತಂದರು. ಆದರೆ ಕನ್ನಡದ ಸ್ವಾತಂತ್ರ್ಯ ಕ್ರಾಂತಿ ರಾಣಿ ಖಡ್ಗ ಏಕೆ ದೇಶಕ್ಕೆ ತರಲು ಪ್ರಯತ್ನಿಸಲಿಲ್ಲಾ. ಇವರು ಮಹಿಳೆ ಅಂತಾ ತಾರತಮ್ಯವೇ ಅಂತಾ ಅನಿಸುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕನ್ನಡ ನಾಡಿನ ರಾಣಿ ಚನ್ನಮ್ಮನ ರಣ ಯುದ್ಧ ಭೂಮಿಯಲ್ಲಿ ಚಳಿಸಿದ ಖಡ್ಗ ನೋಡುವ ಭಾಗ್ಯ ಕನ್ನಡಿಗರಿಗೆ ಕಲ್ಪಿಸಲಿ ಅಂತಾ ಭಾರತ ಸರ್ಕಾರಕ್ಕೆ ಅನೇಕ ಜನರ ಬೇಡಿಕೆಯಾಗಿದೆ.

-: ಚನ್ನಮ್ಮನ ಸ್ಮಾರಕಗಳನ್ನು ರಕ್ಷಿಸಬೇಕು :-

                    ದೇಶದ ಸ್ವಾತಂತ್ರ್ಯದ ದಿನ ದೇಶಕ್ಕಾಗಿ ಹೋರಾಡಿದವರನ್ನು ಸ್ಮರಿಸುತ್ತೇವೆ, ಪೂಜಿಸುತ್ತೇವೆ ಹಾಗೆ ಅವರು ಬಾಳಿ ಬೆಳಗಿದ ಅರಮನೆ, ಸ್ಮಾರಕ ಮತ್ತು ಪ್ರದೇಶಗಳನ್ನು ಗೌರವಿಸಬೇಕಿದೆ. ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಇವರ ಕೆಚ್ಚದೆಯ ಹೋರಾಟದ ಕಥೆ ತಿಳಿಸಲು ಸ್ಮಾರಕ ರಕ್ಷಣೆ ಮಾಡಬೇಕಿದೆ. ಆದ್ದರಿಂದ ಸ್ಮಾರಕ, ಚನ್ನಮ್ಮನ ಕೋಟೆ, ಸ್ನಾನ ಕೊಳ, ಅರಮನೆ, ಯುದ್ಧ ಸಾಮಗ್ರಿ ಸಂಗ್ರಹ ಕೊಠಡಿ ಇತ್ಯಾದಿ ರಕ್ಷಣೆ ಮಾಡಬೇಕಿದೆ. 

                 ಸ್ಮಾರಕ ರಕ್ಷಣೆಗೆ, ಜಿರ್ಣೋದ್ದಾರಕ್ಕೆ ಮತ್ತು ನವೀಕರಣಕ್ಕೆ ಕೊಟ್ಯಾಂತರೂಪಾಯಿ ಹಣದ ಅಗತ್ಯವಿದೆ. ಇವುಗಳ ರಕ್ಷಣೆಗೆ ಚನ್ನಮ್ಮನ ನಾಡು ಕಿತ್ತೂರಿನ ಸುಧಾರಣೆಗೆ ಮತ್ತು ರಕ್ಷಣೆಗೆ ಸರಕಾರ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು 2008 ರಲ್ಲಿ ಮಾಡಿತು. ಆದರು ಸಂರಕ್ಷಣೆ ಪ್ರಯತ್ನ ಅಷ್ಟೊಂದ ಸಮರ್ಪಕವಾಗಿ ಆಗುತ್ತಿಲ್ಲಾ. ಮತ್ತು ಪ್ರಾಧಿಕಾರದಲ್ಲಿ ಹೊಸ ಹೊಸ ಬದಲಾವಣೆ ಆಗಬೇಕಿದೆ. ಇಲ್ಲಿವರೆಗೆ ಕೇವಲ 14-15 ಕೋಟಿ ಹಣ ಮಾತ್ರ ಸರಕಾರ ನೀಡಿದೆ. ಆದ್ದರಿಂದ ಸಂಪೂರ್ಣ ಸ್ಮಾರಕ ರಕ್ಷಣೆ ಪ್ರಾಧಿಕಾರ ಮಾಡಲು ಸಾಧ್ಯವಿಲ್ಲ. ಕಾಕತಿ, ಬೈಲುಹೊಂಗಲದ ಕಾರಾಗೃಹ, ಕಿತ್ತೂರು ಕೋಟೆ, ಚನ್ನಮ್ಮನ ಸಮಾದಿ, ಕಲ್ಮಠ  ಇತ್ಯಾದಿ ಸ್ಥಳಗಳನ್ನು ಸುಧಾರಣೆ ಮಾಡಿ ರಕ್ಷಣೆ ಮಾಡಲು ಮತ್ತು ಗತ ವೈಭವ ಹೆಚ್ಚಿಸಲು 250 ಕೋಟಿ ರೂ ಹಣ ಮತ್ತು ಸಂಪನ್ಮೂಲದ ಅಗತ್ಯವಿದೆ. ಆದ್ದರಿಂದ ಮುಂದಿನ ಬಜೆಟ್ಟಿನಲ್ಲಿ ಹಣ ಮೀಸಲಿಟ್ಟು ಕಿತ್ತೂರು ಉತ್ಸವ ಜಗಮಗಿಸುವಂತೆ ಮಾಡಬೇಕು. ಪ್ರೇಕ್ಷಣೀಯ ಹಾಗೂ ಪ್ರವಾಸೋದ್ಯಮ ಸ್ಥಳವಾಗಿ ಪರಿವರ್ತಿಸಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಗಮನ ಹರಿಸಬೇಕು.

-: ಶೀತಲಿಕರಣಗೊಂಡ ಕಾಕತಿ ಅರಮನೆ :-

                   ಕಾಕತಿ ಬ್ರಿಟಿಷರ ದುಸ್ವಪ್ನದ ರಾಣಿ ಕಿತ್ತೂರು ಚನ್ನಮ್ಮನ ಸ್ವಗ್ರಾಮವಾಗಿದೆ. ಬೆಳಗಾವಿ ಜಿಲ್ಲೆ ಮತ್ತು ತಾಲೂಕಿನ ಒಂದು ಸಣ್ಣ ಗ್ರಾಮವಾಗಿದೆ. ಈ ಗ್ರಾಮದ ಜಿಲ್ಲಾ ಕೇಂದ್ರದಿಂದ 8 ಕಿ.ಮಿ ದೂರದಲ್ಲಿದೆ. ಈ ಗ್ರಾಮದಲ್ಲಿ ಚನ್ನಮ್ಮನಿಗೆ ಸಂಬಂಧಿಸಿದ 1 ಎಕರೆ 10 ಗುಂಟೆ ಖಾಲಿ ಜಾಗವಿದೆ. ಇದು ಸಧ್ಯ ಕಸ ಕಂಟೆ ತುಂಬಿದ ಜಾಗವಾಗಿದೆ. ಇಲ್ಲಿ ಚನ್ನಮ್ಮನ ವಂಶಸ್ಥರಿರುವ ಮನೆಗಳಿವೆ. ಜೊತೆಗೆ ಚನ್ನಮ್ಮನ ಬಾಲ್ಯದ ಅರಮನೆಯಿದೆ ಇದು ಶೀತಲಿಕರಣಗೊಂಡು ಬಿಳ್ಳುವ ದುಸ್ಥಿತಿಯಲ್ಲಿದೆ. ಅವನತಿಗಳ ಅರಮನೆಯ ಸಾಲಿನಲ್ಲಿದೆ. 85% ರಷ್ಟು ಹಾಳಾಗಿದ್ದು ಆಗೋ ಇಗೋ ಬಿಳ್ಳುವಂತಿದೆ. ಆದ್ದರಿಂದ ಕಾಕತಿಯ ಚನ್ನಮ್ಮನ ಬಾಲ್ಯದ ಅರಮನೆ ರಕ್ಷಣೆ ಮಾಡಬೇಕಿದೆ. ಇದನ್ನು ಸಂಘಟನಾತ್ಮಕವಾಗಿ ಪ್ರಯತ್ನ ಮಾಡಬೇಕು.

                 ಈ ಗ್ರಾಮದಲ್ಲಿ 6 ನೇ ತಲೆಮಾರಿನ ಚನ್ನಮ್ಮನ ವಂಶಸ್ಥರಿದ್ದಾರೆ. 4-5 ಕುಟುಂಬ ವಾಸವಾಗಿವೆ. ಬಾಬಾಸಾಹೇಬ ದೇಸಾಯಿ ಇಲ್ಲಿ ಪ್ರಮುಖನಾಗಿದ್ದಾನೆ. ಆದ್ದರಿಂದ ಮತ್ತೆ ಇತಿಹಾಸ ಸಾರಬೇಕಾದರೆ ಕಾಕತಿಯ ಅರಮನೆ ಗತ ವೈಭವ ಕಾಣಲು ಜಿರ್ಣೋದ್ದಾರದ ಅತ್ಯಗತ್ಯವಿದೆ. ಬೆಳಗಾವಿ ಜನ ನಾಯಕ ದೊರೆಗಳು ಅಗತ್ಯ ಕ್ರಮಕೈಗೊಂಡು ಕಾಕತಿ, ಚನ್ನಮ್ಮನ ಸಮಾದಿ, ಕಲ್ಮಠ, ಕೋಟೆ ಸ್ಮಾರಕ ನವಿಕರಿಸಬೇಕು.

-: ಕಸದ ಗುಡಾದ ಚನ್ನಮ್ಮನ ಕೋಟೆ :-

                   ಗತಕಾಲದಲ್ಲಿ ಘರ್ಜೀಸಿ ಪ್ರಜಾ ಕಲ್ಯಾಣಕ್ಕಾಗಿ, ದೇಶಸೇವೆಗಾಗಿ, ಮಣ್ಣಿನ ಋಣಕ್ಕಾಗಿ ಹೋರಾಡಿ ಇತಿಹಾಸ ಪುಟಕ್ಕೆ ಸೇರಿದ ಕಿತ್ತೂರು ಕೋಟೆ ಮತ್ತು ಸ್ಮಾರಕಗಳು ಇಂದು ಖಾಸಗಿ ವ್ಯಕ್ತಿಗಳ, ಗ್ರಾಮಸ್ಥರ, ಸ್ಥಳೀಯರ ಉಪಯೋಗದ ಸ್ಥಳವಾಗುತ್ತಿದೆ. ಸಾಹಸ, ಧೀರತ್ವ, ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಸ್ಪೂರ್ತಿ ತುಂಬುವ ಸ್ಥಳವಾಗದೆ ಪ್ರಾಧಿಕಾರದ ಅಸಾಯಕತೆ ಮತ್ತು ಸರಕಾರ ನಿರ್ಲಕ್ಷ್ಯತೆಯಿಂದ ಕಸದ ಗುಡಾಗುತ್ತಿದೆ. ಹಾಳು ಹಂಪೆ ಎನ್ನುವಂತೆ ಕಸದ ಕಿತ್ತೂರು ಕೋಟೆಯಾಗುತ್ತಿದೆ.

                   ಅರಮನೆಯ ಅಳಿದುಳಿದ ಗೋಡೆ, ಗೋಪುರಗಳಿಗೆ ಬಟ್ಟೆ, ಹಾಸಗಿ ಹಾಕಿ ಒಣಗಿಸುವ ಸ್ಥಳವಾಗುತ್ತಿದೆ. ಧನ ಕರು ಕಟ್ಟುವದು, ಸುತ್ತಲಿನ ಜನರ ಕಸ ಹಾಕುವದು, ಕಂಟೆ ಕಸ ಬೆಳೆದ ಆವರಣದಲ್ಲಿ ಸತ್ತ ಪ್ರಾಣಿ ಎಸೆಯುವದು ಇತ್ಯಾದಿ  ಚಟುವಟಿಕೆ ನಡೆಯುತ್ತಿವೆ ಮತ್ತು ಅಲ್ಲಲ್ಲಿ ಮಾಧ್ಯಮದ ವರದಿಯಾಗುತ್ತಿವೆ. ಆದ್ದರಿಂದ ಚನ್ನಮ್ಮನ ಇತಿಹಾಸ ಮರಕಳಿಸಲು ಅಳಿದುಳಿದ ಸ್ಮಾರಕಗಳನ್ನು ಸಂರಕ್ಷಿಸಬೇಕಿದೆ. ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿನ ಸ್ಥಳಗಳ ರಕ್ಷಣೆಯನ್ನು ಮಾಡುವ ಹಾಗೆ ಪ್ರಾಧಿಕಾರ ಮಾಡಲು ಪ್ರಾಧಿಕಾರಕ್ಕೆ ಬಲ ತುಂಬಬೇಕಿದೆ.

                   ಸ್ವಚ್ಛ ಪರಿಸರ, ಆವರಣಕ್ಕೆ ಕಾಂಕ್ರೀಟ್, ಕಸಕಡ್ಡಿ ತೆಗೆದು ಹುಲ್ಲು ಹಾಸು ನಿರ್ಮಾಣ, ಕೋಟೆಯ ಎಲ್ಲಾ 23 ಎಕರೆ ಪ್ರದೇಶ ಸರ್ವೆ ಮಾಡಿ  ಗಡಿ ಬೇಲಿ ಹಾಕಿ ಕಾಂಪೌಂಡ್ ಕಟ್ಟಿ ಗೆಟ್ ಹಾಕಬೇಕು. ಹಸಿರು ಸೌಂದರ್ಯ ಕರಣ , ಪ್ರವಾಸೋದ್ಯಮ, ವಸತಿಗೆ ಅನುವು ಮಾಡಿ ಕೊಡಬೇಕು. ಕಿತ್ತೂರು ಉತ್ಸವ ದೇಶ ವ್ಯಾಪ್ತಿ ಪರಿಚಯಿಸಬೇಕು. ಚನ್ನಮ್ಮನ ಆದರ್ಶ, ದೇಶನಿಷ್ಠೆ, ಸಾಹಸ, ವಿಚಾರ ಧಾರೆ, ಸಮಯ ಪ್ರಜ್ಞೆಯನ್ನು ಅಧ್ಯಾಯನಕ್ಕೆ ಒಳಪಡಿಸಿ ಪ್ರಚಾರ ಮಾಡಬೇಕು. ಚನ್ನಮ್ಮನ ಹೆಸರಲ್ಲಿ ಇನ್ನೂ ಹಲವಾರು ಸಂಘ ಸಂಸ್ಥೆಗಳನ್ನು ಪ್ರಾರಂಭಿಸಿ ಜಗಜಾಹಿರು ಗೊಳಿಸಬೇಕು. ಅಂದಾಗಲೇ ಕನ್ನಡದ ಚನ್ನಮ್ಮ ಜಗದ ಚನ್ನಮ್ಮಳಾಗಲು ಸಾಧ್ಯ.


ಲೇಖಕರು:- ಶರೀಫ ಗಂ ಚಿಗಳ್ಳಿ ( ಸಾಹಿತಿ)

ಸಾ/ ಬೆಳಗಲಿ ತಾ/ ಹುಬ್ಬಳ್ಳಿ ಜಿ/ ಧಾರವಾಡ- 580024

Leave a Reply

Your email address will not be published. Required fields are marked *