ಒಂದು ರೂ ನಾಣ್ಯವನ್ನು ಕೈಯಲ್ಲಿ ಹಿಡಿದ ಆ ಹುಡುಗಿ ಅಂಗಡಿಗಳನ್ನೆಲ್ಲಾ ಸುತ್ತಿ ಏನು ಕೇಳಿದಳು ಗೊತ್ತೇ..?
ಆಕೆಗಿನ್ನೂ ಎಂಟು ವರುಷ. ಆ ಪುಟ್ಟ ಹುಡುಗಿ ಒಂದು ರೂಪಾಯಿ ನಾಣ್ಯವನ್ನು ಮುಷ್ಟಿಯಲ್ಲಿ ಹಿಡಿದು ಅಂಗಡಿಗಳ ಸಾಲು ಇರುವ ಬೀದಿಗೆ ಬಂದಿದ್ದಳು. ಬಂದು ಅಂಗಡಿಯ ಒಳ ಹೊಕ್ಕ ಆಕೆ ಹರ್ಷದಿಂದ ತನ್ನ ಬಳಿಯಿದ್ದ ಒಂದು ರೂ. ನಾಣ್ಯವನ್ನು ಮಾಲೀಕನೆಡೆ ಚಾಚಿ, “ಅಂಕಲ್ ಈ ದುಡ್ಡಿಗೆ ನನಗೆ ಈಶ್ವರ ಸಿಗುತ್ತದೆಯೇ” ಎಂದಳು. ಅಂಗಡಿಯ ಮಾಲೀಕ ಅಸಹನೆಯಿಂದ ಆ ಒಂದು ರೂಪಾಯಿ ನಾಣ್ಯವನ್ನು ಆಕೆಯಿಂದ ಕಸಿದುಕೊಂಡವನೆ ಅದನ್ನು ಒಂದಿಷ್ಟು ದೂರ ಎಸೆದು ಕೋಪದಿಂದ ಅಂಗಡಿಯಿಂದ ಹೊರದಬ್ಬಿದ.
ಕಣ್ಗಳಲ್ಲಿ ನೀರು ತುಂಬಿಕೊಂಡ ಬಾಲಕಿ ಆ ನಾಣ್ಯವನ್ನು ಎತ್ತಿಕೊಂಡು ಮತ್ತೊಂದು ಅಂಗಡಿಗೆ ಹೋದಳು. ಮತ್ತದೇ ಪ್ರಶ್ನೆ. ಅಂಗಡಿಯಾತ ಆಕೆಯ ಮಾತುಗಳಿಗೆ ನಿರ್ಲಕ್ಷ್ಯ ತೋರಿ ಮುಂದೆ ನಡೆ ಎಂದು ಗದರಿಸಿದ. ಆಕೆಯೇನು ನಿರಾಸೆಗೊಳ್ಳಲಿಲ್ಲ. ಮುಂದಿನ ಅಂಗಡಿಯಲ್ಲಿ ಪ್ರಯತ್ನಿಸುವೆ ಎಂದುಕೊಂಡು ನಾಲ್ಕು ಅಂಗಡಿಗಳನ್ನು ಬಿಟ್ಟು ಇನ್ನೊಂದು ಅಂಗಡಿಗೆ ಒಳಹೊಕ್ಕಳು. ಆ ನಾಣ್ಯವನ್ನು ಬಿಗಿಯಾಗಯೇ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದಳು. ಇನ್ನೊಂದು ಅಂಗಡಿಯಲ್ಲೂ ನಿರಾಸೆಯ ಉತ್ತರ, ತಾತ್ಸಾರದ ನೋಟ.
ಹೀಗೆ ಹತ್ತಾರು ಅಂಗಡಿಯ ಸುತ್ತಿದ ಬಳಿಕ ಛಲಬಿಡದ ತ್ರಿವಿಕಮನಂತೆ ಕೊಂಚ ವಯಸ್ಸಾದ ವೃದ್ಧರೊಬ್ಬರ ಮಾಲೀಕತ್ವದ ಅಂಗಡಿಯ ಒಳಹೋದಳು. ಆತನನ್ನು ಕಂಡ ತಕ್ಷಣ ಆಕೆಗೆ ಒಂದು ವಿಧದ ನಂಬಿಕೆ. ಸೌಮ್ಯ ಮುಖದ ಮನುಷ್ಯ ಆಕೆಯನ್ನು “ಬಾ ಮಗು , ಏನು ಬೇಕು ?” ಎಂದು ಸಮಾಧಾನದಿಂದಲೆ ಕೇಳಿದ. ಆತನ ಮಾತಗಳಲ್ಲಿ ಆಕೆಗೆ ವಿಶ್ವಾಸ. ಒಂದು ರೂ. ನಾಣ್ಯ ಹಿಡಿದಿದ್ದ ಕೈಯನ್ನು ಮುಂದೆ ಚಾಚಿ ಅಂಗೈ ಅಗಲಿಸಿದಳು. ಅಲ್ಲಿ ಒಂದು ರೂ ನಾಣ್ಯವನ್ನು ಕಂಡ ಅಂಗಡಿಯ ಮಾಲೀಕ, “ಈ ಹಣಕ್ಕೆ ಏನು ಬೇಕು?” ಎಂದ. ಆಗ ಆಕೆಯಿಂದ ಅದೇ ಉತ್ತರ… “ನನಗೆ ಭಗವಂತ ಬೇಕು ಅಥವಾ ಈಶ್ವರ ಬೇಕು” ಎಂಬುದು. “ನಿನಗೆ ಭಗವಂತ ಬೇಕ, ಆತನನ್ನು ನೀನು ಏಕೆ ಕೇಳುತ್ತಿರುವೆ, ಆತನಿಂದ ನಿನಗೆ ಏನಾಗಬೇಕು?” ಅಂಗಡಿಯ ಮಾಲೀಕನ ಮರುಪ್ರಶ್ನೆ . ಖುಷಿಯಿಂದ ಹಾಗು ಆತ್ಮೀಯತೆಯಿಂದ ಆ ಮುಗ್ಧ ಮಗು ಹೇಳಿತು “ನನ್ನಮ್ಮನಿಗೆ ಹುಷಾರಿಲ್ಲ, ಅವಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅವಳನ್ನು ಉಳಿಸಲು ಭಗವಂತನೆ ಬರಬೇಕಂತೆ ಹಾಗೆಂದು ವೈದ್ಯರು ಹೇಳಿದ್ದಾರೆ. ನನ್ನಮ್ಮ ದಿನವಿಡೀ ದುಡಿದು ಊಟ ತರುತ್ತಾಳೆ. ಅವಳಿಲ್ಲವೆಂದರೆ ಊಟ ತರುವವರು ಯಾರು? ಅದಕ್ಕೆ ಅವಳನ್ನು ಗುಣಪಡಿಸಳು ಈಶ್ವರನನ್ನು ಕೊಳ್ಳಲು ಬಂದೆ. ನಿಮ್ಮ ಅಂಗಡಿಯಲ್ಲಿ ಈಶ್ವರನಿದ್ದಾನ? ಇದ್ದರೆ ಈ ಒಂದು ರೂ. ತೆಗೆದುಕೊಂಡು ಅವನನ್ನು ಕೊಡುವಿರಾ? ಈ ಒಂದು ರೂಪಾಯಿಯನ್ನು ಬಹಳ ದಿನಗಳಿಂದ ಜೋಪಾನ ಮಾಡಿರುವೆ” ಎಂದಿತು ಆ ಮುಗ್ಧ ಮಗು.
ಆಗ ಆ ಮಾಲೀಕ “ಆಯ್ತು ನಮ್ಮ ಅಂಗಡಿಯಲ್ಲಿ ಭಗವಂತ ಸಿಗುತ್ತಾನೆ ಕೊಡುವೆನು” ಎಂದವನೇ… ಒಂದು ಲೋಟದಷ್ಟು ನೀರನ್ನು ಕೊಟ್ಟು , ಮಗು ನಿನ್ನ ಅಮ್ಮ ದಣಿದಿರಬಹುದು ಈ ಒಂದು ಲೋಟ ನೀರನ್ನು ಆಕೆಗೆ ಕುಡಿಸಿ ಬಾ. ನಂತರ ನಿನಗೆ ಭಗವಂತನನ್ನು ಕೊಡುತ್ತೇನೆ. ನಿನ್ನ ಅಮ್ಮ ಹುಷರಾಗಬಹುದು ಎಂದು ಹೇಳಿ ಕಳುಹಿಸುತ್ತಾನೆ.
ಅತ್ತ ಆಸ್ಪತ್ರೆಯಲ್ಲಿ ಮಗುವಿನ ತಾಯಿಗೆ ಅಪರೇಷನ್ ಆಗುತ್ತದೆ. ಆ ತಾಯಿಗೆ ಬಹು ಬೇಗ ಆರೋಗ್ಯವು ಸುಧಾರಿಸುತ್ತದೆ. ಮನೆಗೆ ಹೋಗುವ ಮುನ್ನ ಡಾಕ್ಟರ್ ಕೊಟ್ಟ ಆಸ್ಪತ್ರೆಯ ಮತ್ತು ಆಪರೇಷನ್ ಬಿಲ್ ಅನ್ನು ನೋಡಿ ಆಕೆಯ ತಾಯಿ ಗಾಬರಿಯಾಗುತ್ತಾಳೆ. ಏನು ಮಾಡುವುದೆಂದು ತೋಚದೆ ಅ ಬಿಲ್ಲನ್ನು ನೋಡುತ್ತ ನಿಲ್ಲುತ್ತಾಳೆ. ಆಗ ಡಾಕ್ಟರ್ ಸಮಾಧಾನದಿಂದ ಹೇಳುತ್ತಾರೆ “ಹೆದರಬೇಡಿ ನಿಮ್ಮ ಬಿಲ್ ಅನ್ನು ವೃದ್ದರೊಬ್ಬರು ತುಂಬಿ ಹೋಗಿದ್ದಾರೆ. ಜೊತೆಗೆ ನಿಮಗೆ ಪತ್ರವನ್ನು ಕೊಟ್ಟಿದ್ದಾರೆ” ಎಂದು. ಆ ವೃದ್ದ ಕೊಟ್ಟ ಪತ್ರವನ್ನು ಬಿಡಿಸಿ ಓದಲು ಆರಂಭಿಸುತ್ತಾಳೆ, ಅದರಲ್ಲಿ ಹೀಗೆ ಬರೆದಿತ್ತು. “ತಾಯಿ, ನೀನು ನನಗೆ ಧನ್ಯವಾದ ಹೇಳುವ ಅಗತ್ಯವಿಲ್ಲ. ನಿಮ್ಮನ್ನು ಆ ಭಗವಂತನೆ ಬದುಕುಳಿಸಿದ್ದಾನೆ . ನಿಮಗೆ ಧನ್ಯವಾದ ಹೇಳಬೇಕೆಂದಿದ್ದರೆ ಆ ಮುಗ್ದ ಮಗುವಿಗೆ ಹೇಳಿ, ಆ ಮಗು ಒಂದು ರೂಪಾಯಿ ಹಿಡಿದು ಧೃಡ ವಿಶ್ವಾಸದೊಂದಿಗೆ ಭಗವಂತನನ್ನು ಹುಡುಕಲು ಹೊರಟಿತು. ಆ ಮಗುವಿನ ದೃಢ ವಿಶ್ವಾಸವೆ ನಿಮ್ಮನ್ನು ಉಳಿಸಿದ್ದು” ಎಂದು.
ತಾಯಿ ತನ್ನ ಮಗುವನ್ನು ಬಾಚಿ ತಬ್ಬಿದಳು ಇಬ್ಬರಲ್ಲೂ ಆನಂದಬಾಷ್ಪ ಉದುರಿತು. ಭಗವಂತನನ್ನು ಹುಡುಕಲು ಕೋಟಿ ಕೋಟಿ ದಾನ ಮಾಡಬೇಕೆಂದು ಇಲ್ಲ, ಮನದಲ್ಲಿ ದೃಢ ವಿಶ್ವಾಸದೊಂದಿಗೆ ಹುಡುಕಿದರೆ ಒಂದು ರೂಪಾಯಿಯಲ್ಲೂ ಭಗವಂತನ ಸಿಗುತ್ತಾನೆ. ಬನ್ನಿ ಭಗವಂತನಲ್ಲಿ ದೃಢ ವಿಶ್ವಾಸ ಹೊಂದೋಣ, ಸರ್ವ ಜೀವ ರಾಶಿಗೆ ಒಳಿತು ಬಯಸೋಣ.