ಈ ಮಕ್ಕಳ ನೋವು ಹಾಗೂ ಕಣ್ಣೀರು ಒಮ್ಮೆ ನೋಡಿ… ನಮ್ಮ ರಾಜಕಾರಣಿಗಳೂ ಕೆಲವೊಮ್ಮೆ ಇಡುವ ಕಣ್ಣೀರಾ ಇದು ?
ಈ ಮಕ್ಕಳು ಕಳೆದುಕೊಂಡಿರುವುದು ತಮ್ಮ ತಂದೆ-ತಾಯಿಗಳನ್ನಲ್ಲ, ಸೋದರರು ಅಥವಾ ಬಂಧು-ಮಿತ್ರರನ್ನೂ ಅಲ್ಲ, ಇದೆಲ್ಲಕ್ಕೂ ಮಿಗಿಲಾದ ಹಾಗೂ ಈ ಎಲ್ಲವೂ ಆಗಿದ್ದ ತಮ್ಮ ಪಾಲಿನ ಸರ್ವಸ್ವವನ್ನೇ ಕಳೆದುಕೊಂಡವರು. ಹಾಗಾಗಿಯೇ ಇವರುಗಳಿಗೆ ದುಃಖ, ಕಣ್ಣೀರು ಹಾಗೂ ನೋವು ತಡೆಯಲಾಗುತ್ತಿಲ್ಲ.
ಒಮ್ಮೆ ಇವರೆಲ್ಲರ ಮುಖಗಳನ್ನು ಗಮನವಿಟ್ಟು ನೋಡಿ. ಯಾರೊಬ್ಬರ ಮುಖದಲ್ಲಾದರೂ ನಮ್ಮ ರಾಜಕಾರಣಿಗಳು ಆಗೊಮ್ಮೆ ಈಗೊಮ್ಮೆ ಸಂದರ್ಭಾನುಸಾರ ಸುರಿಸುವ ಕಣ್ಣೀರು ಹಾಗೂ ವ್ಯಕ್ತಪಡಿಸುವ ನೋವಿನಂತೆ ಖಂಡಿತಾ ಇಲ್ಲ ಅಲ್ಲವೇ?
ಸಂತರ ಸಂತ, ಲಕ್ಷ ಲಕ್ಷ ವಿದ್ಯಾರ್ಥಿಗಳ ಪಾಲಿನ ಅನ್ನ ಹಾಗೂ ಅಕ್ಷರ ದಾಸೋಹಿ ಈ ಜಗದಲ್ಲಿನ ಸಾರ್ಥಕ 111 ವರ್ಷಗಳನ್ನು ಪೂರೈಸಿ ಅನಂತದಲ್ಲಿ ಲೀನವಾಗಲು ಉಳಿದದ್ದು ಕೇವಲ ಕೆಲವೇ ಗಂಟೆಗಳು ಎಂಬುದನ್ನು ನಂಬಲು ಅಸಾಧ್ಯವಾದಂತಹ ದೃಶ್ಯ ಕಂಡು ಕಣ್ಣೀರಿಡುತ್ತಿರುವ ತುಮಕೂರು ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಗ್ಧ ಮಕ್ಕಳಿವರು.
ಇಲ್ಲಿ ಅಭ್ಯಾಸ ಮಾಡುತ್ತಿರುವ ಸಾವಿರ ಸಾವಿರ ಮಂದಿಯಲ್ಲಿ ಬಹುಪಾಲು ತಮ್ಮ ಮನೆಯಲ್ಲಿ ತಮ್ಮ ಮಕ್ಕಳನ್ನು ಸಿದ್ಧಗಂಗಾ ಶ್ರೀಗಳಂತೆ ಸಾಕಿ ಸಲಹಿ ಶಿಕ್ಷಣ ಕೊಡಿಸಲು ಸಾಧ್ಯವಿಲ್ಲ ಎನ್ನುವಂತಹ ಕುಟುಂಬದ ಮಕ್ಕಳೇ ಬಹುಪಾಲು. ಇವರೆಲ್ಲರ ಭರವಸೆಯೇ ನಡೆದಾಡುವ ದೇವರು ಆಗಿದ್ದರು.
ಪಕ್ಕದ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾಗಿ ಪರಮಪೂಜ್ಯ ಶ್ರೀಗಳಿಗೆ ನಮನ ಸಲ್ಲಿಸುತ್ತಿರುವ ದೃಶ್ಯವನ್ನೂ ಒಮ್ಮೆ ನೋಡಿ. ಅವರ ಆ ಭಾವದಲ್ಲಿ ಒಂದಿನಿತಾದರೂ ಕೃತಕತೆಯ ಛಾಯೆ ಕಂಡುಬಂದೀತೆ? ಇದು ನಿಜವಾದ ಭಾವಪೂರ್ಣ ಶ್ರದ್ಧಾಂಜಲಿ ಅಲ್ಲವೇ?
ಮೋದಿಯವರು ಅಂತ್ಯಕ್ರಿಯೆಗೆ ಬಾರದಿರಲು ಕೈಗೊಂಡ ತೀರ್ಮಾನ ಅವರ ಬಹುದೊಡ್ಡ ವ್ಯಕ್ತಿತ್ವಕ್ಕೆ ಸಾಕ್ಷಿಯಾಯಿತು. ತಾನು ದರ್ಶನಕ್ಕೆ ಅಥವಾ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಾದರೆ ನನ್ನ ಭದ್ರತಾ ದೃಷ್ಟಿಯಿಂದ ಕೈಗೊಳ್ಳಬಹುದಾದ ವ್ಯವಸ್ಥೆಗಳು ಶ್ರೀ ಸಾಮಾನ್ಯರಿಗೆ ದೇವರ ದರ್ಶನಕ್ಕೆ ಅಡ್ಡಿಯಾಗಬಾರದು ಎಂಬ ಅವರ ಮನಃಸ್ಥಿತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ನಿಸ್ಸಂದೇಹ.
ಫೋಟೋ ಕ್ಲಿಕ್ಕಿಸುವಾಗ ಜಿಗುಪ್ಸೆ ಮೂಡಿತು : ದೇವರೆಡೆಗೆ ಅಡಿಯಿಟ್ಟ ದೇವರ ಅಂತಿಮ ವಿಧಿ-ವಿಧಾನಗಳ ಬಳಿಕ ಗದ್ದುಗೆಯ ಸಮೀಪ ನಡೆದ ಫೋಟೋ ಸೆಷನ್ ನನ್ನಲ್ಲಿ ಜಿಗುಪ್ಸೆ ಮೂಡಿಸಿತು. ಇವರುಗಳೇನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಯೊಂದು ಮೂಡಿ ಒಂದೆಡೆ ಈ ಕಂದಮ್ಮಗಳ ಮುಖಗಳು ಕಣ್ಮುಂದೆ ಸುಳಿದಾಡಿದವು. ಮತ್ತೆಂದೂ ಬಾರದ ಲೋಕಕ್ಕೆ ಪಯಣ ಬೆಳೆಸಿರುವ ಯುಗಪುರುಷನ ಕ್ರಿಯಾಗದ್ದುಗೆಯ ಮುಂಭಾಗ ನಡೆದ ಫೋಟೋ ಕ್ಲಿಕ್ಕಿಸುವ ಕೆಲಸ “ಅತಿಯಾಯಿತೇನೊ” ಎಂದು ನನ್ನಂತೆ ಬಹುತೇಕರಿಗೆ
ಅನ್ನಿಸಿರಲೂಬಹುದು.
-ಜಿ.ಎಂ.ಆರ್. ಆರಾಧ್ಯ.