ಈಜು ಬಲ್ಲವ ಆಳಕ್ಕೆ ಹೆದರಬೇಕಿಲ್ಲ: ಎಲ್ಲಾ ದಾಖಲೆ ಇದ್ದರೆ ದಂಡಕ್ಕೆ ಅಂಜಬೇಕಿಲ್ಲ
ಈಜು ಬಲ್ಲವ ಎಂದು ನೀರಿನ ಆಳದ ಬಗ್ಗೆ ಚಿಂತಿಸಲಾರ.
ವ್ಯವಸ್ಥೆಯಲ್ಲಿ ಒಂದು ಬದಲಾವಣೆ ಅನಿವಾರ್ಯ ಆದಾಗ ಒಂದಿಷ್ಟು ಕಠಿಣ ಕ್ರಮಗಳು ಸಹ ಅತ್ಯಗತ್ಯ ಅಲ್ಲವೇ?
ಈಗ ಮೋಟಾರು ವಾಹನ ಕಾಯ್ದೆಯಡಿ ವಿಧಿಸುತ್ತಿರುವ ತಂಡಗಳ ಮೊತ್ತ ಅತಿಯಾಯಿತು .ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ಎಷ್ಟು ಸತ್ಯವೋ ಅದೇ ರೀತಿ ವಾಹನ ಸವಾರರು ಪಾಲಿಸಬೇಕಾದ ನಿಯಮಗಳು ಕಠಿಣ ಸಾಧ್ಯವೂಗಳೇನೂ ಅಲ್ಲ ಎಂಬುದು ಅಷ್ಟೇ ಸತ್ಯ .
ಸಂಚಾರಿ ಪೊಲೀಸರು ವಾಹನ ಸವಾರರಿಂದ ಕೇಳುವ ಅಗತ್ಯ ದಾಖಲೆಗಳೆಂದರೆ ವಾಹನ ಚಾಲನಾ ಪರವಾನಗಿ (ಡಿ.ಎಲ್), ವಾಹನದ ವಿಮೆ (ಇನ್ಶುರೆನ್ಸ್ ),ಪರಿಸರ ಮಾಲಿನ್ಯ ಮಂಡಳಿಯ ತಪಾಸಣಾ ಪತ್ರ ಹಾಗೂ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಇದರ ಜೊತೆ ಕುಡಿದು ವಾಹನ ಚಾಲನೆ ಮಾಡಬೇಡಿ ಎಂಬ ಕರಾರು.
ಇಲ್ಲಿರುವ ಅಂಶಗಳಲ್ಲಿ ಯಾವುದು ಕಷ್ಟ ಎಂಬುದನ್ನು ಹೊಸ ದಂಡ ಕ್ರಮವನ್ನು ಪ್ರಶ್ನಿಸುವವರು ಮೊದಲು ಉತ್ತರಿಸಲಿ. ಮೇಲ್ ಕಾಣಿಸಿರುವ ದಂಡಕ್ಕೆ ಕಾರಣವಾಗಬಹುದಾದ ಯಾವುದನ್ನು ಪಾಲಿಸುವುದು ಕಷ್ಟ ?
ಹಾಗೆಂದು ನಾನೇನು ಈಗ ವಿಪರೀತ ಏರಿಸಿರುವ ದಂಡದ ಪ್ರಮಾಣವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಇದು ಅತಿಯಾಯಿತು ನಿಜ ಆದರೆ ಒಮ್ಮೆ ದಂಡ ಪಾವತಿಸಿದ ವ್ಯಕ್ತಿ ಮೇಲ್ಕಾಣಿಸಿದ ದಾಖಲೆಗಳನ್ನು ಇಟ್ಟುಕೊಳ್ಳದೆ ಮುಂದೆಂದೂ ವಾಹನ ಚಲಾಯಿಸಲಾರ.
ಒಮ್ಮೆ ಮಾತ್ರ ಮೇಲ್ಕಾಣಿಸಿದ ಅವುಗಳಲ್ಲಿ ಯಾವುದಾದರೊಂದು ಉಲ್ಲಂಘನೆಯಾದಲ್ಲಿ ಆತನ ವಾಹನ ಸಂಖ್ಯೆ ಡಿ.ಎಲ್ ಇತ್ಯಾದಿಯನ್ನು ಗುರುತಿಸಿಕೊಂಡು ಆತ ಪುನಃ ಅಪರಾಧ ಎಸಗಿದರೆ ಆಗ ಅವನಿಗೆ ಬಲಿ ಹಾಕಲಿ. ಇಷ್ಟಕ್ಕೂ ಭಾರೀ ಮೊತ್ತದ ದಂಡ ವಿಧಿಸುವುದರಿಂದ ಈ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗುತ್ತದೆ ಎಂಬ ನಂಬಿಕೆಯೂ ನನಗಿಲ್ಲ. ಆದರೂ ವಾಹನ ಸವಾರರಿಗೆ ಒಂದು ಎಚ್ಚರಿಕೆ ಯಂತೂ ಇದ್ದೇ ಇರುತ್ತದೆ. ರಸ್ತೆಯಲ್ಲೀಗ ಹೆಲ್ಮೆಟ್ ಇಲ್ಲದ ಸವಾರರನ್ನು ನಾನೇನು ಗಮನಿಸಿಲ್ಲ ಬಹುತೇಕ ಎಲ್ಲರೂ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸುತ್ತಾರೆ .
ವಾಹನ ಸವಾರರು ದಂಡದ ಮೊತ್ತ ಹೆಚ್ಚಾಯಿತೆಂದು ಹಣೆ ಚಚ್ಚಿಕೊಳ್ಳುವ ಬದಲು ಕುಡಿದು ವಾಹನ ಚಾಲನೆ ಮಾಡುವುದನ್ನು ನಿಲ್ಲಿಸಲು ಯತ್ನಿಸಲಿ. ವಾಹನದ ಮಾಲೀಕನ ಬಳಿ ಪರಿಸರ ಮಾಲಿನ್ಯ ತಪಾಸಣಾ ಪತ್ರ ಇಲ್ಲದಿದ್ದಲ್ಲಿ ಆತನಿಗೆ ಸ್ಥಳದಲ್ಲೇ ವಾಹನದ ತಪಾಸಣೆ ಮಾಡಿ ನಿಗದಿತ ಮೊತ್ತ ಕಟ್ಟಿಸಿಕೊಂಡು ತಪಾಸಣಾ ಪತ್ರ ನೀಡುವ ಕ್ರಮ ಜಾರಿಗೆ ಬರಲಿ .
ಹೆಲ್ಮೆಟ್ ಇಲ್ಲದಿದ್ದಲ್ಲಿ ಆದ್ದರಿಂದ ಅಗತ್ಯ ಪ್ರಮಾಣದ ಹಣ ಪಡೆದು ಸ್ಥಳದಲ್ಲೇ ಹೆಲ್ಮೆಟ್ ನೀಡುವ ವ್ಯವಸ್ಥೆ ಮಾಡಲಿ ಎಂಬ ಕಾರಣಕ್ಕೆ ಹೋರಾಟ ಮಾಡುವುದಾದರೆ ಖಂಡಿತ ಅದನ್ನು ಬೆಂಬಲಿಸುವ ಮೊದಲ ವ್ಯಕ್ತಿ ನಾನು. ನನ್ನ ಮಿತ್ರರೊಬ್ಬರು ನಿನ್ನೆ ತಮಾಷೆಗೆ ಹೇಳುತ್ತಿದ್ದರು “ಹಿಂದೆಲ್ಲಾ ಸಂಚಾರಿ ಪೊಲೀಸ್ ಠಾಣೆಗೆ ಸಿವಿಲ್ ಪೊಲೀಸರು ಸೇವೆಗೆ ಸೇರಲು ಹಿಂದೇಟು ಹಾಕುತ್ತಿದ್ದರು. ಟ್ರಾಫಿಕ್ ಗೆ ಟ್ರಾನ್ಸ್ಫರ್ ಆಗಿದೆ ಎಂದು ಮುಖಕಿವುಚಿ ಕೊಳ್ಳುತ್ತಿದ್ದರು. ಆದರೆ ಹೊಸ ದಂಡದ ಪ್ರಮಾಣ ಜಾರಿಗೆ ಬಂದಾಗಿನಿಂದ ನನ್ನನ್ನು ಟ್ರಾಫಿಕ್ಗೆ ಯಾಕೆ ಹಾಕಬಾರದು ಎಂದು ಅಂದುಕೊಳ್ಳತೊಡಗಿದ್ದಾರೆ” ಎಂದು. ಆತ ಹೇಳಿದ್ದು ತಮಾಷೆಗಾಗಿ ಆದರೂ ನನಗೇಕೋ “ಹೌದು ಇದು ನಡೆದಿರಲು ಬಹುದಲ್ಲವೇ? ಅನ್ನಿಸಿತ್ತು “.
-ಜಿ. ಎಂ. ಆರ್. ಆರಾಧ್ಯ