ಈಗಲ್ಲ, ಎಂದೋ ಹೇಳಿದ್ದರು ಸಿರಿಗೆರೆ ಜಗದ್ಗುರುಗಳು ವೀರಶೈವ-ಲಿಂಗಾಯಿತ ಎಂಬುದು ಎರಡು ಒಂದೇ
ಆತ್ಮೀಯ ಬಂಧುಗಳೇ,
ವೀರಶೈವ -ಲಿಂಗಾಯಿತದ ಕುರಿತ ಪ್ರಚಲಿತದ ಬೆಳವಣಿಗೆಗಳು ತಮಗೆಲ್ಲ ತಿಳಿದೇ ಇದೆ. ಆದರೆ ಸಮಾಜವನ್ನು ಒಡೆಯುವ, ಹೋಳು ಮಾಡುವ ಕೆಲವೇ ಕೆಲವರು ಈ ಕೆಳಕಂಡ ಅಂಶಗಳನ್ನು ಗಮನಿಸಬೇಕಾಗಿ ವಿನಂತಿ.
ಕೆಲ ವರ್ಷಗಳ ಕೆಳಗೆ ಸಿರಿಗೆರೆಯ ಡಾ. ಶಿವಮೂರ್ತಿ ಮಹಾಸ್ವಾಮಿಗಳು ವಿದೇಶೀ ಮಾಧ್ಯಮವೊಂದಕ್ಕೆ ಹಾಗೂ ಕರ್ನಾಟಕದ ಸಂಸ್ಕೃತಿ ಅಧ್ಯಯನಕ್ಕೆ ಬಂದಿದ್ದವರಿಗೆ ಒಂದು ಸಂದರ್ಶನ ನೀಡಿದ್ದರು. ಆ ಸಂದರ್ಭದಲ್ಲೇ ಅವರು ಸ್ಪಷ್ಟಪಡಿಸಿದ್ದರು. ವೀರಶೈವರೆಂದರೆ ನಾವುಗಳೇ. ಅದಕ್ಕೆ ಮತ್ತೊಂದು ಹೆಸರು ಲಿಂಗಾಯಿತ ಎಂದು. ಏಕೆಂದರೆ ನಾವು ಎದೆಯ ಮೇಲೆ “ಲಿಂಗ” ಹೊಂದಿರುತ್ತೇವೆ ಎಂದು.
ಅವರದ್ದೇ ಮಾತುಗಳಲ್ಲಿ ಕೇಳಿ “ನಮ್ಮದು ವೀರಶೈವ ಸಂಸ್ಕೃತ ಅಥವಾ ಲಿಂಗಾಯತ ಸಂಸ್ಕೃತಿ. ಭಾರತದಲ್ಲಿ ಅನೇಕರು ಶಿವನ ಆರಾಧಕರು. ಶಿವನ ಆರಾಧಕರೆಲ್ಲ ಶೈವರು. ಕರ್ನಾಟಕದಲ್ಲಿ ವೀರಶೈವರು ಅಥವಾ ಲಿಂಗಾಯಿತರೇ ಹೆಚ್ಚು. ವಿಷ್ಣುವಿನ ಆರಾಧಕರು ವೈಷ್ಣವರು. ಹೇಗೆ ಕ್ರಿಸ್ತನ ಅನುಯಾಯಿಗಳು ಕ್ರೈಸ್ತರೋ ಹಾಗೆ ಶಿವನ ಆರಾಧಕರೆಲ್ಲ ವೀರಶೈವರು ಅಥವಾ ಲಿಂಗಾಯಿತರು. ವೀರಶೈವರಿಗೆ ಮತ್ತೊಂದು ಹೆಸರು ಲಿಂಗಾಯಿತರು. ಏಕೆಂದರೆ ನಾವು ಎದೆಯ ಮೇಲೆ ಲಿಂಗಧಾರಣಿ ಮಾಡಿಕೊಂಡಿರುತ್ತೇವೆ”
ಸಮಾಜ ವಿಘಟನೆಗೆ ಚಿತ್ರದುರ್ಗ ಶರಣರ ವಿರುದ್ಧ ಸಿರಿಗೆರೆ ಶ್ರೀಗಳ ಕಠಿಣ ಮಾತುಗಳು
ದಾವಣಗೆರೆಯ ವಿರಕ್ತ ಮಠದ ಶ್ರೀಗಳಾಗಿದ್ದ ಬಸವ ಜಯ ಮೃತ್ಯುಂಜಯ ಶ್ರೀಗಳನ್ನು ಚಿತ್ರದುರ್ಗದ ಮುರುಘಾ ಶರಣರು ಪಂಚಮಸಾಲಿ ಪೀಠದ ಜಗದ್ಗುರುಗಳನ್ನಾಗಿ ಮಾಡಿ ಕೂಡಲ ಸಂಗಮಕ್ಕೆ ನೇಮಿಸಿದ್ದರು. ಕೂಡಲ ಸಂಗಮದಲ್ಲಿ ನಡೆದ ಸಮಾರಂಭದಲ್ಲಿ ಪಂಚಮಸಾಲಿ ಪೀಠದ ಜಗದ್ಗುರುಗಳಾಗಿ ಅವರಿಗೆ ಪೀಠಾರೋಹಣವೂ ನಡೆಯಿತು.
ಇದಾದ ಬಳಿಕ 2008ರಲ್ಲಿ ಪಂಚಮಸಾಲಿ ಸಮಾಜ ಬಾಂಧವರು ತಮ್ಮ ಜಗದ್ಗುರುಗಳನ್ನಾಗಿ ಮತ್ತೊಬ್ಬರು ಶ್ರೀಗಳಿಗೆ (ಈಗ ಅವರನ್ನು ಮಠದಿಂದ ದೂರ ಇಡಲಾಗಿದೆ) ಅಂದರೆ ಸಿದ್ಧಲಿಂಗ ಶ್ರೀಗಳಿಗೆ ಪೀಠಾರೋಹಣ ಮಾಡಿಸಿದರು. ಈ ಸಂದರ್ಭದಲ್ಲಿ ಹರಿಹರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಿರಿಗೆರೆ ಜಗದ್ಗುರು ಡಾ. ಶಿವಮೂರ್ತಿ ಶ್ರೀಗಳು ಚಿತ್ರದುರ್ಗ ಶರಣರ ವಿರುದ್ಧ ಹರಿಹಾಯ್ದರು. ಸಮಾಜವನ್ನು ವಿಘಟನೆ ಮಾಡಿದ ಶರಣರನ್ನು ಹಿಗ್ಗಾ ಮುಗ್ಗಾ ನಿಂದಿಸಿದ್ದರು.
ಸಿರಿಗೆರೆ ಶ್ರೀಗಳು ಚಿತ್ರದುರ್ಗ ಶರಣರ ಕುರಿತು ಏನು ಹೇಳಿದ್ದರು ಎಂಬುದನ್ನು ಅವರದ್ದೆ ಮಾತುಗಳಲ್ಲಿ ಕೇಳಿ.
“ ಜಗದ್ಗುರು ಪದ ನನಗೆ ಬೇಡ ಎನ್ನುತಾರೆ. ನಾನು ಶರಣ ಅಂತ ಹೇಳ್ಕೋತ್ತಾರೆ. ಆದರೆ ಮಾಡಿದ್ದೇನು? ಒಂದು ವಾರದ ಕೆಳಗೆ ಮತ್ತೊಂದು ಪ್ರತಿಸ್ಪರ್ಧಿ ಯಾಗಿ ಇನ್ನೊಂದು ಮಠ ಮಾಡಿ ಈ ಸಮಾಜದ ಸಂಘಟನೆಗೆ ಕುಠಾರ ಪ್ರಾಯರಾಗಿದ್ದಾರೆ ಇದೊಂದು ದುರಂತ. ಇದು ಹೇಗಾಗಿದೆ ಎಂದರೆ, ಇದನ್ನು ರಾಜಕೀಯ ಪರಿ ಭಾಷೆಯಲ್ಲಿ ಹೇಳಬೇಕೆಂದರೆ ವ್ಯಕ್ತಿಯೊಬ್ಬ ತನಗೆ ಮುಖ್ಯಮಂತ್ರಿ ಸ್ಥಾನಬೇಕೆಂಬ ನಿರೀಕ್ಷೆಯಲ್ಲಿದ್ದು ಆ ಸ್ಥಾನ ಸಿಗದಿದ್ದಾಗ ಹೊಂಚುಹಾಕಿ ಅದೇ ಪಾರ್ಟಿ ಹೊಡೆದು ಬೇರೆ ಪಾರ್ಟಿ ಕಟ್ಟುತ್ತಾರಲ್ಲ ಅದೇ ರೀತಿ ಮಾಡಿದ್ದಾರೆ. ಅಂಥ ಕೊಳಕು ರಾಜಕೀಯ ನಡೆದಿದೆ ಇಲ್ಲಿ. ಜಾತಿ-ಜಾತಿ ಮಧ್ಯೆ ಸಾಮರಸ್ಯ ಮೂಡಿಸಿದಂಥ, ಜಾತಿಯನ್ನು ಅಳಿಸಲು ಪ್ರಯತ್ನಿಸಿದ ಬಸವಣ್ಣನ ಕಾರ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಇಂಥ ಹೀನ ಕೃತ್ಯ ನಡೆದಿದೆ ಎಂದು ಹೇಳಲಿಕ್ಕೆ ತಮಗೆ ಜಿಗುಪ್ಸೆ ಆಗುತ್ತೆ. ಯಾವ ಕೂಡಲ ಸಂಗಮ ಇಡೀ ದೇಶಕ್ಕೆ, ಇಡೀ ಪ್ರಪಂಚಕ್ಕೇ ಮಾದರಿಯಾಗಿತ್ತೋ ಅಂಥ ಕೂಡಲ ಸಂಗಮವನ್ನು, ಈ ಸಮಾಜವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು ಎಂಬ ಕೆಟ್ಟ ಆಲೋಚನೆಯಿಂದ ಇಂಥ ಕೊಳಕು ರಾಜಕೀಯ ಕೂಡಲ ಸಂಗಮದಲ್ಲಿ ಆಗಿದೆ ಎಂದು ಹೇಳಲಿಕ್ಕೆ ನಾವು ಇಷ್ಟಪಡ್ತೀವಿ”.
ಕೇವಲ ಪಂಚಮಸಾಲಿ ಸಮಾಜ ಎರಡು ಸ್ವಾಮಿಗಳನ್ನು ಹೊಂದಿದ್ದಕ್ಕೇ ಇಷ್ಟೊಂದು ಆಕ್ರೋಶ ವ್ಯಕ್ತಪಡಿಸಿ ಮಾತನಾಡಿರುವ ಸಿರಿಗೆರೆಯ ಡಾ. ಜಗದ್ಗುರುಗಳು ಈಗ ವೀರಶೈವ -ಲಿಂಗಾಯ್ತ ಬೇರೆ ಬೇರೆ ಎಂದು ಹೊಡೆದಾಡುತ್ತಿರುವ ಮಂದಿಯಿಂದ ಎಷ್ಟು ಜಿಗುಪ್ಸೆಗೆ ಒಳಗಾಗಿರಬಹುದು ಎಂದು ಒಮ್ಮೆ ನೀವೇ ಯೋಚಿಸಿ ನೋಡಿ.