ಆಹಾರ ಮತ್ತು ಗುಣ
ಮಿತ್ರರೇ, ನಮ್ಮ ಹಿರಿಯರ ಆಚರಣೆಗಳೆಲ್ಲವೂ ಅರ್ಥಪೂರ್ಣವಾಗಿಯೇ ಇರುತ್ತದೆ. ಮನೆಯಲ್ಲಿ ಹಿರಿಯರು ಇದ್ದರೆ ಊಟದ ವಿಚಾರದಲ್ಲಿ ಕಟ್ಟುನಿಟ್ಟಾಗಿ ಬಹಳಷ್ಟು ವಿಷಯಗಳನ್ನು ಹೇಳುತ್ತಾರೆ. ಅದರಲ್ಲಿ ಮುಖ್ಯವಾಗಿ ಆಹಾರ ಸೇವಿಸುವ ಸಂದರ್ಭ ಹೇಗಿರಬೇಕು ಮತ್ತು ಯಾರ ಮನೆಗಳಲ್ಲಿ ಆಹಾರ ಸೇವಿಸಬೇಕು ಎಂಬುದನ್ನೂ ಒಳಗೊಂಡಿರುತ್ತದೆ ಅಲ್ಲವೇ? ಯಾರ ಮನೆಗಳಲ್ಲಿ ಆಹಾರ ಸೇವಿಸಬೇಕು ಎಂಬುದಕ್ಕೆ ಕಥೆಯೊಂದನ್ನು ಹೇಳುತ್ತೇನೆ, ಕೇಳಿ.
ಅವನೊಬ್ಬ ಸಾಧು. ಅಂದಂದಿನ ಆಹಾರವನ್ನು ಅಂದೇ ಭಿಕ್ಷಾಟನೆಯ ಮೂಲಕ ಸಂಗ್ರಹಿಸುತ್ತಿದ್ದ. ಅವನದಾಗಿ ಅವನ ಬಳಿ ಏನೆಂದರೆ ಏನೂ ಇರಲಿಲ್ಲ. ಮೈ ಮೇಲೆ ತುಂಡು ಬಟ್ಟೆ. ಹಗ್ಗದ ಮೇಲೆ ಇನ್ನೊಂದು ತುಂಡು ಬಟ್ಟೆ, ಭಿಕ್ಷಾ ಪಾತ್ರೆ ಮತ್ತು ಜೋಳಿಗೆ… ಇಷ್ಟೇ ಅವನ ಆಸ್ತಿ! ಎಲ್ಲಿಗೆ ಬೇಕೆಂದರಲ್ಲಿಗೆ ಮನಸೋ ಇಚ್ಛೆ ಸಂಚರಿಸುತ್ತಿದ್ದ. ಇಷ್ಟ ಬಂದಲ್ಲಿ ತಿಂಗಳುಗಟ್ಟಲೆ ಉಳಿಯುತ್ತಿದ್ದ. ತನ್ನ ಬಳಿ ಕಷ್ಟ ಹೇಳಿಕೊಂಡು ಬಂದವರ ನೋವು ನಿವಾರಿಸಲು ತನ್ನ ಕೈಲಾದಷ್ಟು ಸಹಕರಿಸುತ್ತಿದ್ದ. ಅನೇಕ ಹಳ್ಳಿ-ಊರುಗಳಲ್ಲಿ ಈ ಸಾಧುವಿನ ನಡೆ, ನುಡಿ, ಮುಖದಲ್ಲಿನ ದಿವ್ಯ ತೇಜಕ್ಕೆ ಶರಣಾಗಿ ಅಲ್ಲಿನ ಮುಖ್ಯಸ್ಥರು ಸಾಧುವಿಗೆ ಜಮೀನು ಕೊಟ್ಟು ಆಶ್ರಮ ಕಟ್ಟಿಕೊಂಡು ಅಲ್ಲಿಯೇ ಇದ್ದು ತಮ್ಮ ಜಾಗದ ಜನಗಳಿಗೆ ದಾರ್ಶನಿಕ ಬೋಧನೆ ಮತ್ತು ಜೀವನದ ಉತ್ತಮ ಮಾರ್ಗದರ್ಶನ ಮಾಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದರು. ಆದರೆ ಸ್ವಭಾವತಃ ಸಂನ್ಯಾಸಿಯೂ, ನಿರ್ಮೋಹಿಯೂ ಆದ ಈ ಸಂತ ಇವೆಲ್ಲವನ್ನೂ ವಿನಮ್ರವಾಗಿ ತಿರಸ್ಕರಿಸಿ, ಅತ್ಯಂತ ಸಾಧಾರಣ ಹಾಗೂ ಅಲೆಮಾರಿ ಜೀವನ ನಡೆಸುತ್ತಿದ್ದ.
ಹೀಗಿರುವಾಗ ಒಂದು ದಿನ ಆ ಸಾಧು ಸಂಚರಿಸುತ್ತಿರುವಾಗ ಕತ್ತಲು ಆವರಿಸಿತು. ಜೊತೆಗೆ ಅಸಾಧ್ಯ ಗುಡುಗು-ಮಿಂಚುಗಳಿಂದ ಕೂಡಿದ ಭಾರಿ ಮಳೆ ಶುರುವಾಯಿತು. ಅನತಿ ದೂರದಲ್ಲಿ ಒಂದು ಚಿಕ್ಕ ಮನೆ ಕಂಡು, ಆಶ್ರಯಕ್ಕಾಗಿ ಅಲ್ಲಿಗೆ ಧಾವಿಸಿದ. ಸಾಧುವನ್ನು ನೋಡಿದ ಮನೆಯಾತ, ಅವನನ್ನು ಒಳಗೆ ಕರೆದು ಉಪಚರಿಸಿದ. ಹೊಟ್ಟೆಯ ತುಂಬಾ ಆಹಾರ ನೀಡಿ, ಮಲಗಲು ಕಂಬಳಿಯನ್ನು ಹಾಸಿದ. ಸಾಧು ಮನೆಯೊಡೆಯನ ಆದರ, ಆಥಿತ್ಯವನ್ನು ಸ್ವೀಕರಿಸಿ ಸಂತುಷ್ಟನಾಗಿ ಮಲಗಿದ.
ಎಂದಿನಂತೆ ಬೆಳಿಗ್ಗಿನ ಝಾವ, ಬ್ರಾಹ್ಮೀ ಮುಹೂರ್ತಕ್ಕೆ ಎದ್ದ ಸಾಧುವಿಗೆ ತಾನು ಎಲ್ಲಿದ್ದೇನೆ ಎಂದು ಅರಿವಾಗಲು ಕ್ಷಣಕಾಲ ಬೇಕಾಯಿತು. ಹಿಂದಿನ ರಾತ್ರಿ ನಡೆದ ಘಟನೆಗಳು ಅಪರಿಚಿತ ವ್ಯಕ್ತಿಯ ಆದರಾತಿಥ್ಯವನ್ನು ನೆನಪಿಸಿದರೆ, ಕಣ್ಣು ಸುತ್ತಲೂ ಮನೆಯ ಪರಿಸರವನ್ನು ವೀಕ್ಷಿಸುತ್ತದೆ. ಆಗ ಜಂತಿಯ ಮೇಲೆ ತನ್ನ ಕಣ್ಣಿಗೆ ಕಂಡ ಎರಡು ಮಡಿಕೆಗಳನ್ನು ಕೂಡಲೇ ಸಾಧು ಜೋಳಿಗೆಗೆ ತುಂಬಿಸಿಕೊಂಡು ಮನೆಯ ಯಜಮಾನನಿಗೂ ತಿಳಿಸದೆಯೇ ಮನೆಯ ಬಾಗಿಲು ತೆರೆದುಕೊಂಡು ಮನೆಯಿಂದ ಹೊರಟೇ ಬಿಡುತ್ತಾನೆ.
ಸರಸರನೆ ನಡೆಯುತ್ತಾ ತನ್ನ ಗಮ್ಯಸ್ಥಾನದತ್ತ ಹೊರಟ ಸಾಧುವಿಗೆ… ಎದುರಿಗೆ ಹರಿಯುವ ನದಿ ಕಂಡಾಗ ತನ್ನ ಪ್ರಾತಃ ಕಾರ್ಯಗಳನ್ನು ಮುಗಿಸುವ ಮನಸ್ಸಾಗುತ್ತದೆ. ಬಹಿರ್ದೆಸೆಯನ್ನು ಮುಗಿಸಿ ಬರುತ್ತಿದ್ದಂತೆ ಇದುವರೆಗೂ ವಿಚಿತ್ರ ತಳಮಳದಿಂದ ಕೂಡಿದ್ದ ಮನಸ್ಸಿನ ಕಸಿವಿಸಿ ಇಲ್ಲದಾಗಿ, ಮನಸ್ಸು ತಿಳಿ ನೀರಿನಂತೆ ಶುಭ್ರವಾಗುತ್ತದೆ. ಸ್ನಾನ ಮುಗಿಸಿ ತನ್ನ ಜೋಳಿಗೆ ಎತ್ತಿಕೊಂಡಾಗ… ಅದು ಭಾರವಾಗಿರುವುದು ಸಾಧುವಿನ ಅರಿವಿಗೆ ಬರುತ್ತದೆ. ಒಳಗಿರುವ ವಸ್ತುವನ್ನು ನೋಡಿದ ತಕ್ಷಣ ಗಾಬರಿಗೊಳ್ಳುತ್ತಾನೆ! ತನಗೆ ಹಿಂದಿನ ರಾತ್ರಿ ಆಶ್ರಯ ನೀಡಿದ ಮನೆಯ ಯಜಮಾನನಿಗೆ ಗೊತ್ತಾಗದಂತೆ ತಾನು ತಂದ ಮಡಿಕೆಗಳ ಅರಿವಾಗುತ್ತದೆ. ಅಂದರೆ, ತಾನು ಕಳ್ಳತನ ಮಾಡಿದೆ..! ಎನ್ನುವುದು ತಿಳಿಯುತ್ತಲೇ ಸಾಧು ಗಾಬರಿಗೊಳ್ಳುತ್ತಾನೆ. ಅವನ ಬಗ್ಗೆ ಅವನಿಗೇ ಅಸಹ್ಯ ಮೂಡುತ್ತದೆ. ತನ್ನ ಈ ಕೃತ್ಯದ ಕಾರಣ ತಿಳಿಯಲು ಸಾಧು ಕೂಡಲೇ ತನ್ನ ಗಮ್ಯಸ್ಥಾನವನ್ನು ಬದಲಿಸಿ, ತನ್ನ ಪರಮ ಗುರುಗಳ ಸನ್ನಿಧಾನಕ್ಕೆ ತೆರಳಿ, ಗುರು ಪಾದಗಳಿಗೆ ತನ್ನ ತಲೆ ಹಚ್ಚಿ… ಗಳಗಳನೆ ರೋಧಿಸುತ್ತಾನೆ.
ಗುರುಗಳು ದಿವ್ಯದೃಷ್ಟಿಯಿಂದ ನಡೆದದ್ದನ್ನೂ ತಿಳಿಯುತ್ತಾರೆ. ನಂತರ ಸಾಧುವಿನ ಕಡೆಗೆ ತಿರುಗಿ “ನೀನು ಎಲ್ಲವನ್ನೂ ತ್ಯಜಿಸಿದವನು. ನಿನಗಾಗಿ ಬಂದ ಮಠ, ಮಾನ್ಯಗಳನ್ನೂ ಒಪ್ಪದವನು. ಇಂದು ಹೀಗೆ ಕಳ್ಳತನ ಮಾಡಲು ಕಾರಣ ಏನಿರಬಹುದು… ಎಂಬುದು ನಿನ್ನ ಯೋಚನೆ ಅಲ್ಲವೇ? ನೀನು ನಿನ್ನೆ ತಂಗಿದ್ದು ಒಬ್ಬ ಕಳ್ಳನ ಮನೆಯಲ್ಲಿ. ಅವನು ನೀಡಿದ ಆಹಾರವನ್ನು ಸೇವಿಸಿದ್ದರಿಂದ ನಿನ್ನಲ್ಲಿಯೂ ಅಂತಹದೇ ಬುದ್ಧಿ ಪ್ರಚೋದನೆಯಾಗಿ, ಆಶ್ರಯ ನೀಡಿದವನ ಮನೆಯಿಂದಲೇ ಕಳ್ಳತನ ಮಾಡಿಕೊಂಡು ಬಂದೆ. ಯಾವಾಗ ನೀನು ಬಹಿರ್ದೆಸೆಗೆ ಹೋಗಿ ಬಂದೆಯೋ… ಆಗ ಅವನು ನೀಡಿದ ಆಹಾರವು ಮಲದ ರೂಪದಲ್ಲಿ ಹೊರಗೆ ಹೋಯಿತು. ಎಂದಿನಂತೆ ನಿನ್ನಲ್ಲಿ ಇದ್ದ ಸಾತ್ವಿಕ ಹಾಗೂ ದೈವೀಕ ಗುಣಸ್ವಭಾವಗಳು ಮತ್ತೆ ನಿನ್ನನ್ನು ಜಾಗೃತಗೊಳಿಸಿವೆ” ಎಂದು ವಿವರಿಸಿದರು.
ಮಿತ್ರರೇ, ಇದೇ ರೀತಿಯಾದ ಪ್ರಸಂಗವೊಂದು ಮಹಾಭಾರತದಲ್ಲೂ ಎದುರಾಗುತ್ತದೆ. ಯುದ್ಧ ಮುಗಿದ ನಂತರ, ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರ ಬಳಿಗೆ ಪಂಚ ಪಾಂಡವರು, ಕೃಷ್ಣ ಹಾಗೂ ದ್ರೌಪತಿ ಬರುತ್ತಾರೆ. ಆಗ ಭೀಷ್ಮರು ದ್ರೌಪತಿಯ ಬಳಿಯಲ್ಲಿ “ಅಂದಿನ ವಸ್ತ್ರಾಪಹರಣದ ಸಂದರ್ಭದಲ್ಲಿನ ನನ್ನ ನಡವಳಿಕೆಯಿಂದ ನಿನ್ನ ಮನಸ್ಸು ತೀರ ನೊಂದಿದೆಯೆಂದು ಅರಿತಿದ್ದೇನೆ. ನಿನ್ನ ಬಳಿ ಕ್ಷಮೆ ಕೇಳಲು ಇದೊಂದು ಅವಕಾಶ ದೊರಕಿದ್ದಕ್ಕಾಗಿ ಹರ್ಷಿಸುತ್ತೇನೆ, ತಾಯಿ. ಅಂದು ನೀನು ನನಗೆ ಧರ್ಮ ತಿಳಿಯದೆಂದೆ. ಅದು ಸತ್ಯ ಕೂಡ ಆಗಿತ್ತು. ದುರ್ಯೋಧನನಂತಹ ದುಷ್ಟನ ಅನ್ನ ತಿಂದ ಫಲವಾಗಿ ನನ್ನ ಬುದ್ಧಿಯನ್ನು ಮಂಕು ಕವಿದು ಮರುಳು ಮಾಡಿತ್ತು! ಆದರೆ ತಾಯಿ, ಈಗ ಆ ಅನ್ನದ ಅಣುಮಾತ್ರವೂ ನನ್ನಲ್ಲಿ ಉಳಿದಿಲ್ಲ. ಅವೆಲ್ಲವೂ ರಕ್ತ ಮಾಂಸಗಳ ಮೂಲಕ ಬಸಿದು… ಬಸಿದು… ಹೋಗಿದೆ. ದೇಹ ಶುದ್ಧವಾಗುತ್ತಿದ್ದಂತೆ… ಬುದ್ಧಿಯೂ ಶುದ್ಧವಾಗಿದೆ. ಮನ ತಿಳಿಯಾದ ಕೊಳದಂತೆ ನಿರ್ಮಲವಾಗಿದೆ. ಅದಕ್ಕಾಗಿಯೇ ಅಂದು ಕಾಣದೆ ಮರೆಯಾಗಿದ್ದ ಧರ್ಮ, ನ್ಯಾಯಗಳು ಇಂದು ಕಾಣುತ್ತಿವೆ. ‘ಆಹಾರ ಶುದ್ಧೌ ಸತ್ತ್ವ ಶುದ್ಧಿಃ’ ಎಂದ ವೇದದ ವಾಕ್ಯ ಎಷ್ಟು ನಿಜವಲ್ಲವೇ? ಆಹಾರ ಶುದ್ಧವಾಗಿದ್ದರೆ ನಮ್ಮ ಮನಸ್ಸು ಶುದ್ಧವಾಗಿರುತ್ತದೆ” ಎಂದು ದ್ರೌಪದಿಯಲ್ಲಿ ತನ್ನ ಅಂದಿನ ತಪ್ಪಿಗಾಗಿ ಕ್ಷಮೆ ಕೋರುತ್ತಾರೆ.
ಈಗ ಹೇಳಿ ಮಿತ್ರರೇ… ನಮ್ಮ ಆಹಾರ ಹೇಗಿರಬೇಕು? ಯಾವುದೋ ಟಿವಿಯ ದರಿದ್ರ ಕಾರ್ಯಕ್ರಮಗಳನ್ನು ನೋಡುತ್ತಾ ಅಥವಾ ಇನ್ಯಾರಿಗೋ ಛಿಮಾರಿ ಹಾಕುತ್ತಾ ತಿಂದ ಆಹಾರವು ನಮ್ಮನ್ನು ಶುದ್ಧವಾಗಿ ಇಡುವುದೇ? ಅಥವಾ ಮನೆಮಂದಿಯೊಂದಿಗೆ ಕುಳಿತು ಪ್ರೀತಿಯಿಂದ, ಮನೆಯಲ್ಲಿಯೇ ತಯಾರಾದ ಆಹಾರವನ್ನು ಲಘುವಾದ ಹಾಸ್ಯದೊಂದಿಗೆ ಹಿತಮಿತವಾಗಿ ತಿನ್ನುವ ಸಹಭೋಜನ ನಮಗೆ ಆರೋಗ್ಯದ ಜೊತೆಗೆ ಮನಶುದ್ಧಿಯನ್ನು ಕೊಡುವುದೇ? ನೀವೇ ಯೋಚಿಸಿ, ನಿರ್ಧರಿಸಿ.
ಸುಮಾ ಕಿರಣ್