ಅಪ್ಪನ ಕ್ಯೆನಲ್ಲಿ ನನ್ನ ಚಪ್ಪಲಿ ಇದ್ದದ್ದು ನೋಡಿ ಅತ್ತುಬಿಟ್ಟೆ..
ಮೊನ್ನೆ ವಿಪರೀತ ಮಳೆಬಂದಾಗ ಮನೆಯ ಅಂಗಳದಲ್ಲಿರುವ ಚಪ್ಪಲಿಯ ಸ್ಟ್ಯಾಂಡ್ನಲ್ಲಿದ್ದ ಬೂಟು,ಚೆಪ್ಪಲಿ ಎಲ್ಲ ನೆನೆದಿದ್ದವು.ಬೆಳಗ್ಗೆ ಹೊರಬಂದು ನೋಡಿದಾಗ,ಅಯ್ಯೋ ರಾತ್ರಿ ಕೆಲವನ್ನಾದರು ಒಳ ಇಡಬಹುದಿತ್ತು ಎಂದುಕೊಂಡೆ.
…..ಅದೇಕೋ ಅಪ್ಪನ ನೆನಪಾಯ್ತು.ಬೆಡ್ ರೂಮ್ ಗೆ ಬಂದವನೇ ಬಾಗಿಲು ಹಾಕಿಕೊಂಡು ಅತ್ತುಬಿಟ್ಟೆ..
ಹೌದು,ನನಗಿನ್ನೂ ನೆನಪಿದೆ.ಪ್ರಾಮಾಣಿಕ ಶಿಕ್ಷಕರಾಗಿದ್ದ ಅಪ್ಪ ಮನೇಪಾಠ ಮಾಡುತಿದ್ದರು.(ಪೋಷಕರ ಒತ್ತಾಯದಿಂದ)ಆದರೆ ಎಂದೂ ಮಕ್ಕಳ ಪಾಲಕರಿಂದ ಹಣ ಪಡೆದವರಲ್ಲ.ಮೇಸ್ಟ್ರು ದುಡ್ಡು ಮುಟ್ಟೋಲ್ಲ ಎಂಬ ಕಾರಣಕ್ಕೆ ಅವರು ತರಕಾರಿಗಳನ್ನೂ,ಹಾಲು,ಮಜ್ಜಿಗೆ ಯನ್ನು,ತಾವು ಬೆಳೆದ ತೆಂಗಿನಕಾಯಿ, ಕಡಲೇಕಾಯಿಯನ್ನೋ ಒತ್ತಾಯದಿಂದ ಬಂದು ಅವರಿಲ್ಲದ ವೇಳೆಯಲ್ಲಿ ಮನೆಗೆಕೊಟ್ಟು ಹೋಗುತ್ತಿದ್ದರು .ಎಷ್ಟೋ ಸಲ ಇಂತದಕ್ಕಾಗಿ ತಮ್ಮದಲ್ಲದ ತಪ್ಪಿಗೆ ಅಪ್ಪನಿಂದ “ಏಕೆ ತೆಗೆದುಕೊಂಡೆ ಇವುಗಳನ್ನು “ಎಂದು ಬೈಸಿಕೊಳ್ಳುತ್ತಿದ್ದರು.
ನಮ್ಮಜ್ಜಿ ಹೇಳುತ್ತಿದ್ದರು,”ನಿಮ್ಮ ಅಪ್ಪ ಮೇಷ್ಟ್ರು ಆಗೋ ತನಕ ಕಾಲಿಗೆ ಒಳ್ಳೆ ಚಪ್ಪಲಿ ಹಾಕಿಕೊಳ್ಳಲಿಲ್ಲ.ನನ್ನ ತಮ್ಮ ಹೊಸದನ್ನು ಖರೀದಿಸಿದಾಗ ಹಳೆಯವು ಗಳನ್ನು ನಿಮ್ಮಪ್ಪನಿಗೆ ಕೊಡುತ್ತಿದ್ದರು.ಅವುಗಳನ್ನೇ ಬಲು ಜೋಪಾನ ಮಾಡಿ,ರಿಪೇರಿ ಮಾಡಿಸಿ ಹಾಕಿಕೊಳ್ಳುತ್ತಿದ್ದ”ಎಂದು.
ನಮ್ಮಪ್ಪನ ಅಸಮಾಧಾನದ ನಡುವೆಯೂ ನಾನು ಪತ್ರಕರ್ತನಾಗಿ ‘ನೌಕರಿಗೆ’ ಸೇರಿದೆ.ಹೆಚ್ಚೇನು ಜವಾಬ್ದಾರಿ(ತಂದೆತಾಯಿ,
ಕುಟುಂಬ ನೋಡಿಕೊಳ್ಳಬೇಕು,ಹಣ ಕಳುಹಿಸಬೇಕು,ತಂಗಿ-ಅಕ್ಕನ ಮದುವೆ ಮದುವೆ ಮಾಡಬೇಕು ….ಇತ್ಯಾದಿ)ಗಳು ಇಲ್ಲದ್ದರಿಂದ ಸ್ವೇಚ್ಛೆಯಾಗಿ ಹಣ ಖರ್ಚು ಮಾಡುತ್ತಿದ್ದೆ.ಮದುವೆ,ಮಕ್ಕಳಾದ ಬಳಿಕವೂ ಅಷ್ಟೇ,.
ನಮ್ಮಜ್ಜಿ ಹೇಳಿದ್ದರು,ನಿಮ್ಮಪ್ಪ ಹೊಸ ಪ್ಯಾಂಟ್ ಅಂತ ಹಾಕಿದ್ದು ಸಹ ನೌಕರಿ ಸೇರಿದಮೇಲೆಯೇ ಎಂದು.ಅಲ್ಲಿತನಕ ಅಜ್ಜಿಯ ತಮ್ಮನ ಪ್ಯಾಂಟುಗಳೇ..ಉದ್ಧವಾದರೆ ಕಾಲಬಳಿ ಮಡಚಿ,ಗಿಡ್ಡವಾದರೆ ಹೊಲಿಗೆ ಬಿಚ್ಚಿ ಅವುಗಳನ್ನು ಹಾಕಿಕೊಳ್ಳುತ್ತಿದ್ದರಂತೆ.
ನಾನು ನನ್ನ ಮಕ್ಕಳಿಗೆ ಅವರು ಒಂದು ಪ್ಯಾಂಟ್ ಕೇಳಿದರೆ 2.ಒಂದು ಬನಿಯನ್ ಕೇಳಿದರೆ 2..ಹೀಗೆ ಕೊಡಿಸಿದೆ.ಹಾಗೆ ಕೊಡಿಸುವಾಗ ನಮ್ಮಪ್ಪ ನೆನಪಾಗಲಿಲ್ಲ.
ನಾಲ್ಕು ವರ್ಷದ ಕೆಳಗೆ ಊರಿಗೆ ಹೋಗಿದ್ದೆ,ಹೋಗುವಾಗ ಕಾಲಲ್ಲಿ ಲೆದರ್ ಶೂ ಹಾಕಿಕೊಂಡಿದ್ದೆ.ಮನೆಯ ಬಳಿ ಅಲ್ಲಿ ಇಲ್ಲಿ ಒಡಾಡಲು ಹವಾಯಿ ಚಪ್ಪಲಿ ಹಾಗೂ ಬೆಳಿಗ್ಗೆ ಜಾಗಿಂಗಿಗೆ ರನ್ನಿಂಗ್ ಶೂ ಸಹ ಬ್ಯಾಗ್ನಲ್ಲಿ ಇತ್ತು.
ನಾನು ಮನೆ ವರಾಂಡದಲ್ಲಿ ಶೂ ಬಿಡುವಾಗ ಅಪ್ಪನ ಚಪ್ಪಲಿ ನೋಡಿದೆ.ಬಹುಶಃ 6 ವರ್ಷಗಳ ಹಳೆಯ ಚಪ್ಪಲಿಗಳು ಅವು. ಅಪ್ಪ ಹೀಗೇಕೆ ಎಂದುಕೊಂಡೆ..
ರಾತ್ರಿ ಮಲಗಿದಾಗ 12ಗಂಟೆ.ಅಂದಾಜು ಬೆಳಗಿನ ಜಾವ 3.30 ರ ಸುಮಾರಿಗೆ ಮಳೆ ಆರಂಭ ಆಯ್ತು.ನನಗೂ ಎಚ್ಚರ ಆಯ್ತು.ಹೊರಗೆ ಬಿಟ್ಟಿದ್ದ ಚಪ್ಪಲಿ ಹಾಗೂ ಶೂ ಗಳ ನೆನಪಾಯ್ತು.ಎದ್ದು ಹೊರಬಂದೆ….
ನಮ್ಮಪ್ಪ ನನ್ನ ಶೂ ಹಾಗೂ ಚಪ್ಪಲಿಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದರು.ಅವನ್ನು ಮಳೆಯಲ್ಲಿ ನೆನೆಯದಂತೆ ಜೋಪಾನ ಮಾಡಲು ಜಾಗ ಹುಡುಕುತಿದ್ದರು..
ಅಪ್ಪನ ಕಳಕಳಿ ನೋಡಿ ಕಣ್ಣಾಲಿಗಳು ಒದ್ದೆಯಾಗಿದ್ದವು.
ಮೊನ್ನೆ ಇಲ್ಲಿ ಮಳೆಬಂದು ನನ್ನ ಚಪ್ಪಲಿ ಸ್ಟ್ಯಾಂಡ್ನಲ್ಲಿ ಎಲ್ಲವೂ ಒದ್ದೆಯಾಗಿದ್ದನು ಕಂಡಾಗ ಏಕೋ ಅಪ್ಪ ನೆನಪಾಗಿ ಅತ್ತುಬಿಟ್ಟೆ ..
ಅಪ್ಪ… U were really great…
– ಜಿ ಎಮ್ ಆರ್ ಆರಾಧ್ಯ
heart touching sir. it opens the eyes of every reader.