ಬಳ್ಳೇಶ್ವರದ ಬಳ್ಳಲಿಂಗೇಶ್ವರ ದೇವಾಲಯ

ದೇವಾಲಯಗಳ ಅಧ್ಯಯನದಲ್ಲಿ ಗಮನಿಸುವಾಗ ಕಲ್ಯಾಣ ಚಾಲುಕ್ಯರು ಹಾಗು ಹೊಯ್ಸಳರು ತಮ್ಮದೇ ಆದ ಶೈಲಿಯನ್ನ ಅಳವಡಿಸಿಕೊಂಡು ಹೊಸ ಸ್ವರೂಪವನ್ನೇ ನೀಡಿದರು. ಭವ್ಯ ದೇವಾಲಯಗಳ ನಿರ್ಮಾಣಕ್ಕೆ ನಾಂದಿ ಅವರ ಹಲವು ದೇವಾಲಯಗಳು ದಾವಣಗೆರೆ ಮತ್ತು ಶಿವಮೊಗ್ಗದ ಪರಿಸರದಲ್ಲಿ ನೋಡಬಹುದು. ಅಂತಹ ಅಪುರೂಪದ ಸುಂದರ ದೇವಾಲಯಗಳಲ್ಲಿ ಒಂದಾದ ಹೊನ್ನಾಳಿ ತಾಲ್ಲೂಕಿನ ಬಳ್ಳೇಶ್ವರದಲ್ಲಿರುವ ಬಳ್ಳಲಿಂಗೇಶ್ವರ ದೇವಾಲಯವೂ ಒಂದು. ಹೊನ್ನಾಳಿಗೆ ಅತ್ಯಂತ ಸನಿಹದಲ್ಲಿ ಇದ್ದರೂ ಪ್ರಚಾರದ ಕೊರೆತೆಯಿಂದ ಪ್ರವಾಸಿಗರಿಂದ ದೇವಾಲಯ ದೂರ ಉಳಿದಿದೆ.

ಇನ್ನು ಇತಿಹಾದ ಪುಟದಲ್ಲಿ ಬಳ್ಳೇಶ್ವರ ಗ್ರಾಮ ಪ್ರಮುಖ ಪಟ್ಟಣವಾಗಿದ್ದು ಈಗ ಚಿಕ್ಕ ಗ್ರಾಮವಾಗಿದೆ. ಇಲ್ಲಿ ಸೇವುಣರು ಶಾಸನ ದೊರೆತಿದ್ದು ಸೇವುಣ ಅರಸ ರಾಮಚಂದ್ರನ ಕಾಲದ ಶಾಸನದಲ್ಲಿ ಇಲ್ಲಿನ ಶ್ರೀಧರ ಹಾಗು ಲಕುಮಿ ದೇವರ ಉಲ್ಲೇಖ ನೋಡಬಹುದು. ಇನ್ನು ಹೊಯ್ಸಳರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿ ಬೆಳೆದಿದ್ದು ಎರಡನೇ ವೀರಬಲ್ಲಾಳ ತನ್ನ ತಂದೆ ನಾರಸಿಂಗ ದೇವನ ಹೆಸರಲ್ಲಿ ದೇವಾಲಯ ನಿರ್ಮಿಸಿ ಶಿವಲಿಂಗ ಸ್ಥಾಪಿಸಿದ ಉಲ್ಲೇಖವಿದ್ದು ಅವನ ಹೆಸರೇ ಈ ಊರಿಗೆ ಬಂದಿರಬಹುದೆಂಬ ನಂಬಿಕೆ ಇದೆ. ಇನ್ನು ಹಲವು ಜಿನ ಮೂರ್ತಿಗಳು ಸಿಕ್ಕಿದ್ದು ಬಹುಶಹ ಇದು ಜೈನ ಕೇಂದ್ರವೂ ಆಗಿರಬಹುದು. ಇನ್ನು ಬನವಾಸಿ ಪ್ರಾಂತ್ಯ ಆಳುತ್ತಿದ್ದ ಮಾರಸತ್ಯ ಭೂದಾನ ನೀಡಿದ ಉಲ್ಲೇಖವಿದ್ದು ಗ್ರಾಮದ ಪುರಾತನ ಅಸ್ತಿತ್ವಕ್ಕೆ ಕುರುಹು ಇದ್ದಂತೆ.

ಈ ದೇವಾಲಯವನ್ನು ಹೊಯ್ಸಳ ದೊರೆ ಎರಡನೇ ವೀರಬಲ್ಲಾಳನ ಕಾಲದಲ್ಲಿ ತನ್ನ ತಂದೆ ನಾರಸಿಂದ ದೇವನ ಹೆಸರಿನಲ್ಲಿ ಶಿವಲಿಂಗ ಸ್ಥಾಪಿಸಿದ ಉಲ್ಲೇಖ ನೋಡಬಹುದು. ಅವನ ಕಾಲದಲ್ಲಿಯೇ ನಿರ್ಮಾಣವಾಗಿರವಹುದಾದ ಈ ದೇವಾಲಯ ಮೂರು ಗರ್ಭಗುಡಿ, ಸುಖನಾಸಿ, ನವರಂಗ ಹಾಗು ಮುಖಮಂಟಪವನ್ನು ಹೊಂದಿದೆ. ಮೂಲ ಗರ್ಭಗುಡಿಯಲ್ಲಿ ಬಳ್ಳೇಶ್ವರ ಎಂದು ಕರೆಯುವ ಶಿವಲಿಂಗವಿದ್ದರೆ ಉಳಿದ ಗರ್ಭಗುಡಿಯಲ್ಲಿ ಉಮಾ ಮಹೇಶ್ವರ ಹಾಗು ಕಾರ್ತಿಕೇಯನ ಶಿಲ್ಪಗಳಿವೆ. ಅಂತರಾಳದಲ್ಲಿ ಶಿವಲಿಂಗದ ಮುಂದೆ ನಂದಿ ಇದೆ.

ದೇವಾಲಯದ ಮುಖ್ಯ ಗರ್ಭಗುಡಿಯ ಅಂತರಾಳದ ಬಾಗಿಲುವಾಡ ಸುಂದರವಾಗಿ ಅಲಂಕೃತಗೊಂಡಿದ್ದು ಲಲಾಟದಲ್ಲಿ ಗಜಲಕ್ಶ್ಮೀಯ ಕೆತ್ತೆನೆ ನೋಡಬಹುದು. ಇನ್ನು ಇಲ್ಲ ತ್ರಿಮೂರ್ತಿಗಳ ಕೆತ್ತೆನೆ ಸಹ ನೋಡಬಹುದು. ಉಳಿದ ಎರಡೂ ಗರ್ಭಗುಡಿಯಲ್ಲಿನ ಬಾಗಿಲುವಾಡಗಳು ತ್ರಿಶಾಖದಿಂದ ಅಲಂಕೃತಗೊಂಡಿದ್ದು ಕಾರ್ತಿಕೇಯ ದ್ವಾರದಲ್ಲೂ ತ್ರಿಮೂರ್ತಿಗಳ ಕೆತ್ತೆನೆ ನೋಡಬಹುದು.

ಮೂರು ಗರ್ಭಗುಡಿಗೆ ಸೇರಿದಂತೆ ಒಂದೇ ನವರಂಗ ಇದ್ದು ಒಂಬತ್ತು ಅಂಕಣಗಳನ್ನು ಹೊಂದಿದೆ. ಇಲ್ಲಿ ನಾಲ್ಕು ತಿರುಗಣೆಯ ಕಂಭಗಳ ನೋಡಬಹುದು. ಇನ್ನು ನವರಂಗ ವಿತಾನದಲ್ಲಿನ (ಭುವನೇಶ್ವರಿಯಲ್ಲಿನ) ಅಷ್ಟ ದಿಕ್ಪಾಲಕರ ಕೆತ್ತೆನೆ ಸುಂದರವಾಗಿದೆ. ಉಳಿದ 8 ಭುವನೇಶ್ವರಿಗಳು ಸುಂದರವಾಗಿದೆ. ಇನ್ನು ಇಲ್ಲಿನ ದೇವ ಕೋಷ್ಟಕಗಳಲ್ಲಿ ಕಾರ್ತಿಕೇಯ, ಗಣಪತಿ, ವಿಷ್ಣು, ಬ್ರಹ್ಮ ಹಾಗು ನಾಗನ ಶಿಲ್ಪ ನೋಡಬಹುದು. ಇನ್ನು ಇಲ್ಲಿನ ಮುಖಮಂಟಪದಲ್ಲಿ ಕಕ್ಷಾಸನವಿದ್ದು ದ್ವಾರದಲ್ಲಿನ ಶಾಖೆಗಳು ಹಾಗು ಜಾಲಂದ್ರಗಳು ಸುಂದರವಾಗಿದೆ. ದೇವಾಲಯದ ಮೂರು ಗರ್ಭಗುಡಿಯ ಮೇಲೆ ಶಿಖರವಿದೆ. ಮೂರು ಶಿಖರಗಳು ನವೀಕರಣಗೊಂಡಂತೆ ಕಾಣುತ್ತದೆ.

ಇನ್ನು ದೇವಾಲಯದ ಹತ್ತಿರದಲ್ಲಿ ಒಂದು ಚಿಕ್ಕದಾದ ಗರ್ಭಗುಡಿ ಹಾಗು ಅಂತರಾಳ ಹೊಂದಿರುವ ದೇವಾಲಯವಿದ್ದು ಇಲ್ಲಿ ಶಿವಲಿಂಗ ಹಾಗು ನಂದಿಯನ್ನ ನೋಡಬಹುದು. ಇನ್ನು ಇಲ್ಲಿ ನವೀಕರಣಗೊಂಡ ಬಸದಿ ಇದ್ದು ಇಲ್ಲಿ ದೊರೆತ ಜೈನ ಶಿಲ್ಪಗಳಿವೆ.

ತಲುಪುವ ಬಗ್ಗೆ : ಹೊನ್ನಾಳಿಯಿಂದ ಸುಮಾರು 6 ಕಿ ಮೀ ದೂರದಲ್ಲಿದ್ದು ಹೊನ್ನಾಳಿ – ರಾಣಿ ಬೆನ್ನೂರು ರಸ್ತೆಯಲ್ಲಿ ಕೊನಾಯಕನಹಳ್ಳಿಯ ನಂತರ ಬಲಕ್ಕೆ ತಿರುಗಿ ಬಳ್ಳೇಶ್ವರ ತಲುಪಬಹುದು. ಈ ದೇವಾಲಯ ತುಂಗಾ ನದಿಯ ತೀರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್.

Leave a Reply

Your email address will not be published. Required fields are marked *