ಗಿಡಮೂಲಿಕೆ ಬೇವು

ನಮ್ಮ ಪುರಾತನರು ಬೇವನ್ನು ಔಷಧಿಗಳ ರಾಜ ಎಂದು ಕರೆಯುತ್ತಾರೆ. ಎಲ್ಲರಿಗೂ ಚಿರಪರಿಚಿತವಾದ ಹಾಗೂ ಎಲ್ಲಾ ಕಡೆಯೂ ಸಿಗುವ ಅದ್ಭುತ ಔಷಧೀಯ ಗುಣಗಳಿರುವ ಬೇವನ್ನು ಜನರು ಬಳಕೆ ಮಾಡಲು ಮಾತ್ರ ಹಿಂದೇಟು ಹಾಕುತ್ತಾರೆ, ಕಾರಣ ಅದರ ಕಹಿ ಗುಣ. ಆದರೆ ಸ್ವಲ್ಪ ಮನಸ್ಸು ಮಾಡಿ ಬೇವನ್ನು ಉಪಯೋಗಿಸಿದ್ದೇ ಆದಲ್ಲಿ ಬಂಗಾರದಂತಹ ಆರೋಗ್ಯ ನಮ್ಮದಾಗುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದಲೇ ನಮ್ಮ ಪುರಾತನರು ವರ್ಷಕ್ಕೊಮ್ಮೆಯಾದರೂ ಬೇವನ್ನು ಉಪಯೋಗಿಸಬೇಕೆಂದು ಯುಗಾದಿ ಹಬ್ಬದಂದು ಬೇವು ಬೆಲ್ಲ ತಿನ್ನುವ ಪರಿಪಾಠವನ್ನು ರೂಢಿ ಮಾಡಿದರು.

ಬೇವಿನ ಮರದ ಎಲೆ, ಹೂ, ಹಣ್ಣು, ಕಾಯಿ, ಚಕ್ಕೆ, ಅಂಟು ಎಲ್ಲಾ ಭಾಗಗಳು ಮನೆಮದ್ದಾಗಿ ಉಪಯೋಗಕ್ಕೆ ಬರುತ್ತವೆ. ಬೇವಿನ ರಸ, ಬೇವಿನ ಎಣ್ಣೆಯ ಉಪಯೋಗಗಳು ಸಹ ಅಪಾರ. ಕಹಿ ರುಚಿ ಇದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚರ್ಮ ರೋಗಗಳಿಗೆ, ಕೂದಲಿನ ಸಮಸ್ಯೆಗಳಿಗೆ ಮತ್ತು ದೇಹದ ಆಂತರಿಕ ಆರೋಗ್ಯ ಸಮಸ್ಯೆಗಳಿಗೆ ಬೇವು ಅತ್ಯುತ್ತಮ ಔಷಧಿಯಾಗಿದೆ. ​ಸರ್ವಾಂಗಕ್ಕೂ ಮನೆ ಮದ್ದು ಎಂದರೆ ಅದು ಬೇವು.

ಕಣ್ಣಿನ ಸಮಸ್ಯೆಗಳು, ಚಿಕ್ಕ ಮಕ್ಕಳಲ್ಲಿ ಎದುರಾಗುವ ಮೂಗಿನಲ್ಲಿ ರಕ್ತ ಸ್ರಾವದ ತೊಂದರೆ, ಲೆಪ್ರಸಿ, ಚರ್ಮದ ಅಲ್ಸರ್, ಇಸುಬು, ಕಜ್ಜಿ, ತುರಿಕೆಗಳು, ಹೃದಯದ ಮತ್ತು ಹೃದಯ ರಕ್ತನಾಳದ ತೊಂದರೆಗಳು, ಜ್ವರ, ಮಧುಮೇಹ, ಹಲ್ಲು ಮತ್ತು ವಸಡಿನ ತೊಂದರೆ, ಲಿವರ್ ಸಮಸ್ಯೆ ಮತ್ತು ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆ ಹೀಗೆ ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಬೇವು ಉಪಯೋಗಕ್ಕೆ ಬರುತ್ತದೆ. ಪಿತ್ತ ಶಮನಕ್ಕೆ ಬೇವು ಸುಲಭ ಪರಿಹಾರವಾಗಿದೆ. ​ಬೇವಿನ ರಸವು ರಕ್ತ ಶುದ್ಧೀಕರಣದಲ್ಲಿ ಸಹಾಯಕವಾಗಿದೆ. ರಕ್ತ ಶುದ್ಧಿ ಆಗುವುದರಿಂದ ದೇಹದಲ್ಲಿ ರಕ್ತ ಸಂಚಾರ ಕೂಡ ಉತ್ತಮಗೊಂಡು ದೇಹದ ಇನ್ನಿತರ ಭಾಗಗಳಿಗೂ ಸರಾಗವಾಗಿ ರಕ್ತ ಹರಿಯುತ್ತದೆ. ರಕ್ತದ ಒತ್ತಡ ಸಹ ನಿಯಂತ್ರಣಕ್ಕೆ ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅಂಶವೆಂದು ಪರಿಗಣಿಸಿದ ‘ಎಲ್.ಡಿ.ಎಲ್.’ ಅನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ. ಇದರಿಂದ ಹೃದಯದ ತೊಂದರೆಗಳು ದೂರಾಗುತ್ತವೆ.

​ಮಲೇರಿಯಾ ಮತ್ತು ಜಾಂಡೀಸ್ ಗೆ ರಾಮಬಾಣ. ಇದರಲ್ಲಿರುವ ಆಂಟಿ – ಬ್ಯಾಕ್ಟರಿಯಲ್ ಗುಣ ಲಕ್ಷಣಗಳು ಮಲೇರಿಯಾ ಜ್ವರಕ್ಕೆ ಕಾರಣವಾದ ವೈರಸ್ ನ ಬೆಳವಣಿಗೆಯನ್ನು ಕುಂಠಿತಗೊಳಿಸಿ ಮನುಷ್ಯನ ದೇಹದ ಲಿವರ್ ಅನ್ನು ಬಲವಾಗಿಸುತ್ತದೆ.

ನಿಯಮಿತವಾದ ಬೇವಿನ ಸೇವನೆಯಿಂದ ​ಮಧುಮೇಹದ ನಿಯಂತ್ರಣ ಸಾಧ್ಯ. ಜಂತುಹುಳುಗಳ ನಿವಾರಣೆಗೂ ಬೇವು ಉತ್ತರವಾಗಿದೆ.

​ಹಲ್ಲುಗಳು ಮತ್ತು
ವಸಡುಗಳಲ್ಲಿ ರಕ್ತ ಸೋರಿಕೆಯಾಗುತ್ತಿದ್ದರೆ ಬೇವಿನ ಚಕ್ಕೆ ಅಥವಾ ಬೇವಿನ ಎಲೆಗಳನ್ನು ನೀರಿನಲ್ಲಿ ನೆನೆ ಹಾಕಿ, ಸ್ವಲ್ಪ ಹೊತ್ತಿನ ನಂತರ ಅದನ್ನು ಚೆನ್ನಾಗಿ ರುಬ್ಬಿಕೊಂಡು ವಸಡುಗಳಿಗೆ ಲೇಪನ ಮಾಡಿದರೆ ರಕ್ತ ಸೋರುವುದು ಆಗುವುದು ನಿಲ್ಲುತ್ತದೆ. ಹಲ್ಲುಗಳಲ್ಲಿರುವ ಕೀಟಾಣುಗಳನ್ನು ನಾಶ ಪಡಿಸಲು ವಾರಕ್ಕೊಮ್ಮೆ ಬೇವಿನ ಕಡ್ಡಿಗಳಿಂದ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಬೇಕು.

ಗರ್ಭಿಣಿಯರಿಗೆ ಕಾಡುವ ವಿಪರೀತ ನೋವನ್ನು ಬೇವಿನಿಂದ ನಿಯಂತ್ರಣ ಮಾಡಿಕೊಳ್ಳಬಹುದು. ಬೇವಿನ ರಸದಿಂದ ನಯವಾಗಿ ಮಸಾಜ್ ಮಾಡುವುದರಿಂದ ಹೆರಿಗೆಯ ನೋವು ಕಡಿಮೆಯಾಗುತ್ತದೆ. ಬಾಣಂತಿಯರ ಸೋಂಕು ಹಾಗೂ ಚರ್ಮದ ನವೆಗೆ ಬೇವಿನ ರಸ ಅತ್ಯುತ್ತಮ ಮದ್ದಾಗಿದೆ. ​ಮೊಡವೆಗಳ ನಿವಾರಣೆಗೆ ಬೇವಿನ ನೀರಿನಿಂದ ಮುಖವನ್ನು ತೊಳೆದು ಮಸಾಜ್ ಮಾಡಬೇಕು. ಮುಖದಲ್ಲಿರುವ ತೇವಾಂಶ ಹಾಗೇ ಉಳಿದು ಚರ್ಮದ ಮೃದುತ್ವ ಮತ್ತು ಕಾಂತಿ ಹೆಚ್ಚಾಗುತ್ತದೆ. ​ಪುಟ್ಟ ಮಕ್ಕಳಿಗೆ “ಅಮ್ಮ” ಆದಾಗ ಬೇವಿನ ರಸದ ಲೇಪನದಿಂದ ತಕ್ಷಣವೇ ಪರಿಹಾರ ದೊರೆಯುತ್ತದೆ.

ಗಿಡಗಳಿಗೆ, ತರಕಾರಿಗಳಿಗೆ ರಾಸಾಯನಿಕಗಳ ಬದಲಿಗೆ ಬೇವಿನೆಣ್ಣೆ ಹಾಕಿದ ನೀರನ್ನು ಚಿಮುಕಿಸುವುದರಿಂದ ಉಣ್ಣೆ, ಹುಳು, ಬ್ಯಾಕ್ಟೀರಿಯಾ, ಫಂಗಸ್ ಎಲ್ಲಾ ನಿವಾರಣೆಯಾಗುತ್ತದೆ. ಸಾಕುಪ್ರಾಣಿಗಳ ಚರ್ಮದ ಕಾಯಿಲೆಗಳಿಗೂ ಬೇವಿನ ರಸವನ್ನು ಲೇಪಿಸಲಾಗುತ್ತದೆ.

ಆದ್ದರಿಂದ ಸುಲಭವಾಗಿ ಸಿಗುವ, ಅದ್ಭುತ ಔಷಧೀಯ ಗುಣಗಳಿರುವ ಬೇವನ್ನು ಪ್ರಾರಂಭದಲ್ಲಿಯೇ ಬಳಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳೋಣ, ಆರೋಗ್ಯ ಕಾಪಾಡಿ ಕೊಳ್ಳೋಣ. ತಿಂಗಳಿಗೊಮ್ಮೆಯಾದರೂ ಬೇವಿನ ರಸ ಸೇವಿಸುವುದು ಒಳ್ಳೆಯದು.

ಮಮತಾ ನಾಗರಾಜ್,
ಪಾರಂಪರಿಕ ವೈದ್ಯೆ, ದಾವಣಗೆರೆ.

Leave a Reply

Your email address will not be published. Required fields are marked *