ಗಿಡಮೂಲಿಕೆ ಪಾರಿಜಾತ
ಸಮುದ್ರ ಮಂಥನ ಸಮಯದಲ್ಲಿ ಉದಯಿಸಿದ ಐದು ವೃಕ್ಷಗಳಲ್ಲಿ ಪಾರಿಜಾತವೂ ಒಂದು. ಭಾರತೀಯರು ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು ಬಕುಳದ ಹೂವುಗಳಿಗೆ ಮಾತ್ರ ಇದರಿಂದ ವಿನಾಯಿತಿ ಉಂಟು. ನಮ್ಮ ಹಿರಿಯರು ಪಾರಿಜಾತವನ್ನು ತಿಳಿವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ ಪಾರಿಜಾತ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಪಾರಿಜಾತದ ಕಂಪು ಮೂಗಿಗೆ ಹಿತ. ಇದರ ಸುವಾಸನೆ ಮನಸ್ಸಿಗೆ ತುಂಬಾ ಆಹ್ಲಾದ ನೀಡುತ್ತದೆ. ಪಾರಿಜಾತದ ಮರವಿದ್ದರೆ ಸಾಕು ಸುತ್ತ ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧ ತೇಲಿಬರುವ ಅನುಭವವಾಗುತ್ತದೆ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ. ಇದು ರಾತ್ರಿ ಅರಳುವುದಕ್ಕೆ ಪುರಾಣದಲ್ಲಿ ಕಥೆಗಳಿವೆ. ದೇವಲೋಕದ ಈ ಗಿಡ ಭೂಮಿಯಲ್ಲಿ ಇರುವುದಕ್ಕೂ ರೋಚಕ ಕಥೆಯಿದೆ. ಅದೆಲ್ಲಾ ಏನೇ ಇರಲಿ ಇದು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತದ ಬೀಜದ ಪುಡಿಯನ್ನು ಜೀರ್ಣಾಂಗಗಳ ತೊಂದರೆಗೆ, ಎಲೆಗಳ ರಸವನ್ನು ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾ ರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸಲಾಗುತ್ತದೆ.
ಸುಗಂಧ ತಯಾರಿಕೆಯಲ್ಲಿ ಪಾರಿಜಾತದ ಹೂಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಎಲೆಗಳನ್ನು ನಾಟಾವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ. ಪಾರಿಜಾತದ ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ.
ಪಾರಿಜಾತದ ಎಲೆಗಳು ತಂಪಾಗಿರುವ ಕಾರಣ ದೇಹದಲ್ಲಿ ಎಲ್ಲೇ ಉರಿ, ಗಾಯ, ಊತಗಳಿದ್ದರೂ ಇದರಿಂದ ತಯಾರಿಸಿದ ಎಣ್ಣೆ ಬಳಸುವುದರಿಂದ ಉರಿ ತಗ್ಗುತ್ತದೆ.
ಆಯುರ್ವೇದದ ಪ್ರಕಾರ ಪಾರಿಜಾತದ ಎಲೆಗಳನ್ನು ಮಲೇರಿಯಾ ಹಾಗೂ ಡೆಂಗ್ಯೂ ಜ್ವರಗಳ ಚಿಕಿತ್ಸೆಗೆ ಔಷಧವಾಗಿ ಬಳಸಲಾಗುತ್ತದೆ. ಜ್ವರದ ಚಿಕಿತ್ಸೆಗೆ ಹಾಗೂ ನಂತರದ ಮೈಕೈ ನೋವಿಗೆ ಇದರ ತೊಗಟೆಯ ಕಷಾಯ ಉಪಯೋಗವಾಗುತ್ತದೆ. ಪಾರಿಜಾತದ ಎಣ್ಣೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಅಂಗಾಲಿಗೆ ತಿಕ್ಕುವುದರಿಂದ ಜ್ವರ ಕಡಿಮೆಯಾಗುತ್ತದೆ.
ವಿಪರೀತ ಕಾಡುವ ಕೀಲುನೋವನ್ನು ಶಮನ ಮಾಡುವ ಗುಣ ಪಾರಿಜಾತ ಗಿಡಕ್ಕಿದೆ. ಇದರ ಎಲೆಗಳಿಂದ ಮಾಡುವ ಕಷಾಯ ಸಂಧಿವಾತ ನೋವು ಕಡಿಮೆಯಾಗುವುದು. ಪ್ರತಿದಿನ ಮುಂಜಾನೆ ಪಾರಿಜಾತದ ಎಲೆಗಳ ಕಷಾಯ ಕುಡಿಯುತ್ತಿದ್ದರೆ ಸಂಧಿವಾತ ನಿಯಂತ್ರಣಕ್ಕೆ ಬರುತ್ತದೆ. ಮಂಡಿನೋವಿದ್ದಾಗ ಪಾರಿಜಾತದ ಎಲೆಗಳನ್ನು ಪೇಸ್ಟ್ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದರಿಂದ ಉಪಶಮನ ದೊರೆಯುತ್ತದೆ. ಎಲೆಯಲ್ಲಿ ಕಾರ್ಟಿಲೆಜ್ ಎಂಬ ಅಂಶವು ದೇಹದಲ್ಲಿ ಮೂಳೆ ಸವೆತ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಈ ಚಿಕಿತ್ಸೆ ಮೂಳೆ ಸವೆತದ ಪ್ರಾರಂಭಿಕ ಹಂತದಲ್ಲಿ ಉಪಯೋಗ.
ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗದಂತೆ ನೋಡಿಕೊಳ್ಳುವ ಗುಣ ಪಾರಿಜಾತದ ಎಲೆಗಳಿಗಿದೆ. ಇದರಲ್ಲಿರುವ ಅತ್ಯಧಿಕ ಆ್ಯಂಟಿ ಆಕ್ಸಿಡಂಟ್ ಗುಣ ಇದಕ್ಕೆ ಕಾರಣವಾಗಿದೆ.
ಪಾರಿಜಾತ ಹೂವು ಹಾಗೂ ಎಲೆಗಳಲ್ಲಿರುವ ಎಥನಾಲ್ ಎಂಬ ಅಂಶವು ಕೆಮ್ಮುನ್ನು ಹಾಗೂ ಅಸ್ತಮಾವನ್ನು ನಿವಾರಣೆ ಮಾಡಬಲ್ಲದು. ಪಾರಿಜಾತ ಎಲೆಗಳನ್ನು ಕುದಿಸಿದ ಕಷಾಯಕ್ಕೆ ಸ್ವಲ್ಪ ಶುಂಠಿ ಅಥವಾ ಜೇನುತುಪ್ಪ ಸೇರಿಸಿ 21 ದಿನ ಸೇವಿಸುವುದು ಒಳ್ಳೆಯದು. ಇದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಆದ್ದರಿಂದ ಪಾರಿಜಾತವನ್ನು ಪೂಜೆಗೆ ಬಳಸುವುದರೊಂದಿಗೆ ಮನೆಮದ್ದಾಗಿಯೂ ಬಳಸಿ.
ಮಮತಾ ನಾಗರಾಜ್
ಪಾರಂಪರಿಕ ವೈದ್ಯೆ,
ದಾವಣಗೆರೆ.