ಅನುದಾನ ನೀಡಿದ ಶಾಸಕರು, ಸಚಿವರುಗಳ ಹೆಸರನ್ನು ಪ್ರಕಟಿಸುವುದು ಮೊದಲು ನಿಲ್ಲಲಿ

ಏಕೆಂದರೆ ಇವರ್ಯಾರೂ ಅವರ ತಾತನ ಮನೆಯಿಂದ ಗಂಟು ತಂದು ಹಾಕಿಲ್ಲ

ಚಿತ್ರದಲ್ಲಿ ಕಾಣುವುದು ಒಂದು ಸರ್ಕಾರಿ ಶಾಲೆ. ಇಲ್ಲಿ ಗುರುತಿಸಲ್ಪಟ್ಟಿರುವ ಸ್ಥಳದಲ್ಲಿ ಆ ಶಾಲೆಯ ಹೆಸರಿಗಿಂತಲೂ ದೊಡ್ಡದಾಗಿ ಕಾಣುತ್ತಿದೆ ಅನುದಾನ ನೀಡಿದ ಮಹಾನೀಯರ ಹೆಸರು. ಇದು ಕೇವಲ ಒಂದು ಉದಾಹರಣೆ ಮಾತ್ರ .

ನಾನೀಗ ಹೇಳುತ್ತಿರುವುದು ನಿಗಧಿತ ರಾಜಕೀಯ ಪಕ್ಷವೊಂದರ ಅಥವಾ ನಿಗಧಿತ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ ವಿಷಯ ಖಂಡಿತಾ ಅಲ್ಲ. ಹಾಗಾಗಿ ಈ ಲೇಖನ “ನನ್ನ ಕುರಿತಾಗಿಯೇ ಬರೆದದ್ದು” ಎಂದು ಯಾರಿಗಾದರೂ ಅನ್ನಿಸಿದರೆ ಅದು ಆಶ್ಚರ್ಯಪಡುವಂತಹದ್ದೇನೂ ಅಲ್ಲ.

ಸರ್ಕಾರಿ ಶಾಲೆಯೊಂದರ ಮೊದಲ ಮಹಡಿಯ ಮೂರು ಕೊಠಡಿಗಳ ಮೇಲೆ ಬೃಹದಾಕಾರವಾದ ಹೆಸರೊಂದು ಗಮನ ಸೆಳೆಯಿತು. “ಇಂಥವರ ಅನುದಾನದಲ್ಲಿ ನಿರ್ಮಿಸಲ್ಪಟ್ಟದ್ದು” ಎಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಪ್ರಕಟಿಸಲಾಗಿದೆ. ವಿಚಿತ್ರವೆಂದರೆ ಇದು ಈ ಶಾಲೆಯ ನಾಮಫಲಕಕ್ಕಿಂತಲೂ ಹತ್ತಾರು ಪಟ್ಟು ದೊಡ್ಡದಾಗಿತ್ತು!

ಹೀಗೆಯೇ ಆಸ್ಪತ್ರೆಗಳು, ನೀರಿನ ಟ್ಯಾಂಕ್‍ಗಳು, ಬಸ್ ನಿಲ್ದಾಣಗಳು….ಇಷ್ಟೇ ಏಕೆ, ಮಾರುದ್ದದ ರಸ್ತೆಗಳ ಪಕ್ಕದಲ್ಲೂ ಇವರುಗಳ ಅನುದಾನದ ಬೋರ್ಡ್‍ಗಳು ರಾರಾಜಿಸುತ್ತಿವೆ. ಬಹುಶಃ ದಾನ, ಧರ್ಮ ಮಾಡಿ ಕಟ್ಟಿಸಿದ್ದಾರೆನೋ ಎಂದು ನಗು ಬರುತ್ತದೆ. ಆಧುನಿಕ ಸರ್ವಜ್ಞ ಡಿ.ವಿ.ಗುಂಡಪ್ಪನವರು ತಮ್ಮ “ಮಂಕುತಿಮ್ಮನ ಕಗ್ಗ”ದಲ್ಲಿ ಇಂಥವರ ಕುರಿತೇ ನಾಲ್ಕು ಸಾಲುಗಳನ್ನು ಬರೆದಿದ್ದಾರೆ.

ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ

ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು

ಮನ್ನಣೆಯ ದಾಹವದು ಎಲ್ಲಕಿಂ ತೀಕ್ಷ್ಣ

ಸುಡುವುದಾದತ್ಮವನೆ ಮಂಕುತಿಮ್ಮ…

ಇದರರ್ಥ ಇಷ್ಟೆ, ಅನ್ನಕ್ಕಿಂತಲೂ ಮನುಷ್ಯ ಹಣಕ್ಕೆ ಅಥವಾ ಚಿನ್ನಕ್ಕೆ ಆದ್ಯತೆ ಕೊಡುತ್ತಾನೆ. ಹೆಣ್ಣಿನವಿಷಯದಲ್ಲಿ ಮೇಲಿನ ಎಲ್ಲವನ್ನೂ ಬದಿಗೊತ್ತಿ ಅದನ್ನು ಬಯಸುತ್ತಾನೆ. ತಾನು ನಿರೀಕ್ಷಿಸಿದ ಮಟ್ಟಿಗೆ ಅಧಿಕಾರ ಅಥವಾ ಮನ್ನಣೆ ಇಲ್ಲವೆ ಪ್ರಚಾರ ದೊರೆಯದಾಗ ತನ್ನ ಆತ್ಮವನ್ನೇ ವಂಚಿಸಿಕೊಂಡವನಂತೆ ವರ್ತಿಸುತ್ತಾನೆ ಎಂಬುದು.

ಜನಪ್ರತಿನಿಧಿಗಳಿಗೆ ತಮ್ಮ ತಮ್ಮ ಕ್ಷೇತ್ರ ಹಾಗೂ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಅನುದಾನ  ನೀಡುವುದು ಹೊಸದೇನೂ ಅಲ್ಲ. ಅಂದು ಸಾವಿರ ರೂಗಳ ಸಂಖ್ಯೆಯಲ್ಲಿದ್ದದ್ದು  ನಂತರ ಲಕ್ಷ, ಕೋಟಿ ಹಾಗೂ ಈಗ ನೂರಾರು ಕೋಟಿ ರೂ.ಗಳನ್ನು ತಲುಪಿದೆ. ಹಾಗೆಂದು ಈ ಹಣವನ್ನೇನು ಯಾರೂ ಅವರ ತಾತನ ಮನೆಯಿಂದ ತಂದು ಹಾಕಿದ್ದಲ್ಲ. ಇದು ನಮ್ಮದೇ ಹಣ. ನಮಗಾಗಿ ಹಾಗೂ ನಮ್ಮ ಸೌಲಭ್ಯಗಳಿಗಾಗಿ ಆಳುವ ಸರ್ಕಾರಗಳು ವ್ಯಯಿಸುತ್ತವೆ ಅಷ್ಟೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಹೆಸರು ಹಾಕಿಸಿಕೊಳ್ಳುವವರ ಹಾವಳಿ ಮಿತಿ ಮೀರಿ ಹೋಗಿದೆ. ಬಹುಶಃ ಎಲ್ಲರೂ ಗಮನಿಸಿದ್ದಾರೆ,ಮನದಲ್ಲೇ ಗೊಣಗಿಕೊಂಡಿದ್ದಾರೆ ಅಲ್ಲವೇ?

ಸದ್ಯೆ ಕರ್ನಾಟಕ ಸರ್ಕಾರದ ಸಾಲ 6 ಲಕ್ಷ ಕೋಟಿಗಳಷ್ಟಿದೆ. ವಿಶ್ವ ಬ್ಯಾಂಕ್ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಂದ ಹಾಗೂ ವಿದೇಶಗಳಿಂದ ಪಡೆದಿರುವ ಇಷ್ಟೊಂದು ಸಾಲಕ್ಕೆ ವರ್ಷಕ್ಕೆ ಸಾವಿರಾರು ಕೋಟಿ ರೂ.ಗಳಷ್ಟು ಬಡ್ಡಿಯನ್ನು ಕಟ್ಟಲಾಗುತ್ತಿದೆ. ಈವರೆಗೆ ನಾವು ಯಾವುದೇ ಜನಪ್ರತಿನಿಧಿಯನ್ನಾಗಲಿ ಅಥವಾ ಸರ್ಕಾರದ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನಾಗಲಿ ಈ ಬಗ್ಗೆ ಪ್ರಶ್ನಿಸಿದ್ದೇವೆಯೇ? ಇಷ್ಟೊಂದು ಪ್ರಮಾಣದ ಸಾಲವನ್ನು ತೀರಿಸಲು ರಾಜ್ಯ ಸರ್ಕಾರ ಯಾವ ಮೂಲದಿಂದ ಹಣ ಸಂಗ್ರಹಿಸಬೇಕೆಂದಿದೆ? ಪಡೆದಿರುವ ಸಾಲಕ್ಕೆ ಬಡ್ಡಿ ಕಟ್ಟಲು ಹೊಸ ಹೊಸ ಸಾಲಗಳನ್ನು ಪಡೆಯುತ್ತಿರುವ ಸರ್ಕಾರ ರಾಜ್ಯವನ್ನು ಎತ್ತ ಕೊಂಡೊಯ್ಯುತ್ತಿದೆ? ಹೊಸಹೊಸ ಸರ್ಕಾರಗಳು ಬಂದಾಗ ಈ ಸಾಲದ ಪ್ರಮಾಣ ಇಳಿಯುತ್ತದೇನೋ ಎಂಬ ನಿರೀಕ್ಷೆ ಹುಸಿಯಾಗುತ್ತಲೇ ಇದೆ. ಸಾಲದ ಪ್ರಮಾಣ ಮಾತ್ರ ಏರುತ್ತಲೇ ಇದೆ.

ಪರಿಸ್ಥಿತಿ ಹೀಗಿರುವಾಗ “ಇಂಥವರ ಅನುದಾನದಲ್ಲಿ ನಿರ್ಮಿಸಲ್ಪಟ್ಟದ್ದು” ಎಂಬ ಫಲಕಗಳನ್ನು ನೋಡಿದಾಗ “ಇವರಪ್ಪನ ಮನೆಯಿಂದ ತಂದು ಹಾಕಿದ್ದಾರೆಯೇ” ಎಂಬ ಪ್ರಶ್ನೆ ಮೂಡುವುದು ಸಹಜ ತಾನೇ?

ಇನ್ನಾದರೂ ಜನಪ್ರತಿನಿಧಿಗಳು ತಾವೇ ಮುಂದಾಗಿ ಈ ರೀತಿ ಪ್ರಕಟವಾಗಿರುವ ಫಲಕಗಳನ್ನು ತೆರವುಗೊಳಿಸಿದರೆ ಅದು ಅವರ ಆತ್ಮಸಾಕ್ಷಿ ಎಚ್ಚೆತ್ತುಕೊಂಡಿದೆ ಎಂದಾಗುತ್ತದೆ. ಅಥವಾ ಇಂತಹ ಫಲಕಗಳನ್ನು ಪ್ರಕಟಿಸದಂತೆ ಸಾರ್ವಜನಿಕರು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗುತ್ತದೆ.