ಸಾವಿನ ಸುದ್ದಿ ಒಮ್ಮೆಲೇ ಕೊಡಬೇಡ ಗೆಳೆಯ ಒಡೆದು ಹೋದಾವು ನಮ್ಮವರ ಹೃದಯ
ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ಒಡೆದಾವು ನನ್ನವರ ಹೃದಯ
ನನ್ನಮ್ಮ ನನ್ನ ಕೇಳಿದರೆ
ಆರಿಸಿಬಿಡು ಉರಿವ ದೀಪವನ್ನು
ಮತ್ತೂ ಅರ್ಥವಾಗದಿದ್ದರೆ
ಸುರಿಸಿಬಿಡು ನಾಲ್ಕು ಹನಿ ಕಣ್ಣೀರನ್ನು
ನನ್ನಪ್ಪ ನನ್ನ ಕೇಳಿದರೆ
ಒಮ್ಮೆ ನೇವರಿಸಿಬಿಡು ಅವರ ಬೆನ್ನನ್ನು
ಆದರೂ ಅರ್ಥವಾಗಲಿಲ್ಲವೆಂದರೆ
ಮುರಿದುಬಿಡು ಅವರ ಊರುಗೋಲನ್ನು
ನನ್ನ ತಂಗಿ ಕೇಳಿದರೆ ನನ್ನ
ಬರಿದಾದ ಕೈಯ ಮಣಿಕಟ್ಟು ತೋರಿಸು
ಆದರೂ ಅರ್ಥವಾಗಲಿಲ್ಲವೆಂದರೆ ಆಕೆ
ಕಟ್ಟಿದ್ದ ರಕ್ತಸಿಕ್ತ ರಾಖಿಯನ್ನು ಮುಂದಿಡು
ನನ್ನ ತಮ್ಮ ನನ್ನ ಬಗ್ಗೆ ಕೇಳಿದರೆ
ನಾ ಬರುತ್ತಿದ್ದ ಬರಿದಾದ ದಾರಿ ತೋರಿಸು
ಆದರೂ ಅರ್ಥವಾಗಲಿಲ್ಲವೆಂದರೆ ಅವನ
ಮುಖವನ್ನೊಮ್ಮೆ ಎದೆಗವಚಿ ಸಂತೈಸು
ನನ್ನ ಹೆಂಡತಿ ನನ್ನ ಬಗ್ಗೆ ಕೇಳಿದರೆ
ತಲೆಬಗ್ಗಿಸಿ ಒಂದು ದೀರ್ಘ ನಿಟ್ಟುಸಿರು ಬಿಡು
ಆದರೂ ಅರ್ಥವಾಗಲಿಲ್ಲವೆಂದರೆ ಆಕೆಗೆ
ಅವಳ ಕಾಲಿಗೆ ಬಿದ್ದು ಕಾಲುಂಗುರ ತೆಗೆದುಬಿಡು
ನನ್ನ ಮಗಳು ನನ್ನ ಕೇಳಿದರೆ
ಅವಳ ಹಣೆಗೊಂದು ಹೂಮುತ್ತನಿಡು
ಆಕೆಗೆ ಅರ್ಥವಾಗಲಿಲ್ಲವೆಂದರೆ ಅವಳನ್ನು
ಬಿಗಿದಪ್ಪಿ ಜೋರಾಗಿ ಒಮ್ಮೆ ಅತ್ತುಬಿಡು
ನನ್ನ ಸಾವಿನ ಸುದ್ದಿಯನ್ನು ಒಮ್ಮೆಲೇ
ಕೊಡಬೇಡ ಗೆಳೆಯ
ಒಡೆದಾವು ನನ್ನವರ ಹೃದಯ
ಮೇಲ್ಕಾಣಿಸಿದ ಸಾಲುಗಳ ಲೇಖಕರು ಯಾರೆಂಬುದು ಖಂಡಿತಾ ತಿಳಿದಿಲ್ಲ, ಆದರೆ ಸಾಲುಗಳನ್ನು ಓದು ಓದುತ್ತಿದ್ದಂತೆ ಕಣ್ಣುಗಳು ಹನಿಗೂಡಿದವು. ಯುದ್ಧ ಭೂಮಿಯಲ್ಲಿ ಜೀವವನ್ನೇ ಪಣಕ್ಕಿಟ್ಟು ರಾಷ್ಟ್ರ ರಕ್ಷಣೆಗೆ ಎದೆಕೊಟ್ಟು ನಿಲ್ಲುವ ವೀರಸೇನಾನಿಯೊಬ್ಬ ಯುದ್ಧ ಭೂಮಿಯೊಳಗೆ ಪ್ರವೇಶಿಸುವ ಮುನ್ನ ಇನ್ನೊಂದು ಪಾಳೆಯಲ್ಲಿ ಸೇವೆ ಇದ್ದುದರಿಂದ ಸೇನಾ ಶಿಬಿರದಲ್ಲೇ ತಂಗಿದ್ದ ತನ್ನ ಸಹ ಸೈನಿಕ ಮಿತ್ರನಿಗೆ ಹೇಳುವ ಸಾಲುಗಳಿವು.
ಕುಟುಂಬ ಒಂದು ವೇಳೆ ಸೈನಿಕನೊಬ್ಬನ ವೇತನವನ್ನೇ ಅವಲಂಬಿಸಿ ಇರಬೇಕಾದ ಸಂದರ್ಭವನ್ನೊಮ್ಮೆ ಊಹಿಸಿಕೊಂಡು ಹಾಗೂ ವೀರ ಮರಣವನ್ನಪ್ಪಿದ ಸೇನಾನಿಯೊಬ್ಬ ಈ ಸಾಲುಗಳನ್ನು ಹೇಳಿರುವನು ಎಂದು ಕಲ್ಪಿಸಿಕೊಂಡು (ಮೊನ್ನೆಯ ಸಂದರ್ಭಕ್ಕೆ ವಾಸ್ತವವೂ ಆಗಿರಬಾರದೇಕೆ) ಓದಿ ನೋಡಿ.
ಕೇವಲ ಇಂಥ ಸಂದರ್ಭಗಳಲ್ಲಿ ಮಾತ್ರ ನಮ್ಮ ಸೈನಿಕರ ಸೇವೆಯ ಬಗ್ಗೆ ಶ್ಲಾಘಿಸುವ ನಾವುಗಳು ಏಕೆ ನಿತ್ಯವೂ ಇವರ ರಾಷ್ಟ್ರಭಕ್ತಿ ಹಾಗೂ ತಮ್ಮ ಜೀವದ ಹಂಗು ತೊರೆದು ನಮ್ಮ ರಕ್ಷಣೆಗಾಗಿ ಹೋರಾಡುವ ಪರಿಯನ್ನು ಸ್ಮರಿಸುವುದಿಲ್ಲವೇಕೆ?
ಜೈ ಜವಾನ್…. ಜೈ ಹಿಂದ್….
– ಜಿ.ಎಂ.ಆರ್. ಆರಾಧ್ಯ
ಮೊದಲೆ ಹೇಳುತ್ತಿದೆ ನಿಮ್ಮ ಪತ್ರಿಕೆ
💐💐👌ಜನ ಮಿಡಿತ👌💐💐
ಸ್ಪಂದನೆ ನಿಮ್ಮ ಕಾಳಜಿ ಸುಂದರವಾಗಿ ಇದೆ
ಯೋದರ ಕವಿತೆ ಮನ ಮಿಡಿಯುವಂತಿದೆ..
ಅಭನಂದನೆಗಳು. ಆರಧ್ಯಾ.ಜೀ…
ವೀಮ.