ಶಾಸಕರನ್ನು ನಾಯಿಗೆ ಹೋಲಿಸಿ ವಾಟ್ಸಪ್ ಚಿತ್ರ: ನಾಯಿ ಮಾಲೀಕರಿಂದ ತೀವ್ರ ಆಕ್ರೋಶ

ಮೇಲ್ಕಾಣಿಸಿದ ಚಿತ್ರ ವಾಟ್ಸಪ್ ನಲ್ಲಿ ಹರಿದಾಡತೊಡಗಿದೆ. ಶಾಸಕರುಗಳ ಕಿತ್ತಾಟ – ಕಚ್ಚಾಟಕ್ಕೆ ಬೇಸತ್ತಿರುವ ವ್ಯಕ್ತಿಯೊಬ್ಬರು ನಾಯಿಗಳ ಕಚ್ಚಾಡುವುದನ್ನು ಶಾಸಕರ ಕಚ್ಚಾಟಕ್ಕೆ ಹೋಲಿಸಿ ವಾಟ್ಸಪ್ ಚಿತ್ರವೊಂದನ್ನು ಹರಿಬಿಟ್ಟಿದ್ದಾರೆ.

ಇದರಲ್ಲೇನೂ ವಿಶೇಷವಿಲ್ಲ ಎಂದು ನಿಮಗೆ ಅನಿಸಬಹುದು ಆದರೆ ವಿಷಯ ಅದಲ್ಲ.

ಗುಂಪಿನಲ್ಲಿರುವ ನಾಯಿಗಳಲ್ಲಿ ಎರಡು ನಾಯಿಗಳು ಒಬ್ಬರೇ ಮಾಲೀಕರಿಗೆ ಸೇರಿದವುಗಳು. ಹೌದು ನನ್ನ ಸ್ನೇಹಿತ ವಿದ್ಯಾ ನಗರದಲ್ಲಿರುವ “ಕಾಫಿಕಟ್ಟೆ” ಮಾಲಿಕ ಸಚಿನ್ ಒಬ್ಬ ಅಪ್ರತಿಮ ಶ್ವಾನಪ್ರಿಯ. ವಿವಿಧ ತಳಿಯ ಶ್ವಾನಗಳನ್ನು ಸಾಕಲೆಂದೇ ಅವರು ಅದಕ್ಕೊಂದು ನಿಗದಿತ ಜಾಗ ಮಾಡಿ ಅದನ್ನು ಉದ್ಯಮ ಎಂಬಂತೆ ನಡೆಸಿಕೊಂಡು ಬರುತ್ತಿದ್ದಾರೆ. ಹತ್ತಾರು ನಾಯಿಗಳನ್ನು ಪ್ರೀತಿಯಿಂದ ಸಾಕಿರುವ ಮಾಲೀಕರು ಈಗ ಮೇಲಿನ ಚಿತ್ರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿಗಳು. ಇಂತಹ ನಾಯಿಗಳನ್ನು ಶಾಸಕರಿಗೆ ಹೋಲಿಸುವ ಮೂಲಕ ನಮ್ಮ ನಾಯಿಗಳಿಗೆ ಅವಮಾನ ಮಾಡಲಾಗಿದೆ. ನಮ್ಮ ನಾಯಿಗಳು ಎಷ್ಟೊಂದು ಸ್ವಾಮಿನಿಷ್ಠೆ ಹಾಗೂ ನಿಯತ್ತು ಹೊಂದಿದ್ದಾರೆ ಎಂದರೆ ಹಾದಿ ಬೀದಿಯಲ್ಲಿ ಹೋಗುವ ಯಾರಾದರೂ ಬ್ರೆಡ್ ಅಥವಾ ಬಿಸ್ಕೆತ್ ಹಾಕಿದರೆ ಅವು ಮುಟ್ಟುವುದಿಲ್ಲ ನಾನಾಗಿ ತಿನ್ನಲು ಸೂಚಿಸಿದರೆ ಮಾತ್ರ ಅವು ಮುಂದಾಗುತ್ತವಷ್ಟೇ. ನಮ್ಮ ಮನೆಗಳಲ್ಲಿ ಅಡುಗೆ ಮನೆಯ ತನಕವೂ ಬರುವ ನಾಯಿಗಳು ನಮ್ಮ ಸೂಚನೆ ಇಲ್ಲದೆ ತನ್ನ ಮುಂದೆ ಮೃಷ್ಟಾನ್ನವಿಟ್ಟರೂ ಮುಟ್ಟುವುದಿಲ್ಲ ಇಂಥ ನಾಯಿಗಳನ್ನು ನಮ್ಮ ರಾಜ್ಯದ ಕೆಲ ಎಂ.ಎಲ್.ಎ ಗಳಿಗೆ ಹೋಲಿಸಿ ನಾಯಿಗಳ ಮರ್ಯಾದೆ ಹಾಗೂ ನಿಯತ್ತನ್ನು ಪ್ರಶ್ನಿಸಿರುವ ಮೇಲಿನ ವಾಟ್ಸಪ್ ಸಂದೇಶದ ವಿರುದ್ಧ ಪೊಲೀಸರಿಗೆ ದೂರು ನೀಡಲು ಹಾಗೂ ಶ್ವಾನ ಪ್ರಿಯ ಸಂಘಟನೆಗಳ ಮೊರೆ ಹೋಗಲು ನಿರ್ಧರಿಸಿದ್ದಾರೆ. ಸಾಧ್ಯವಾದರೆ ನ್ಯಾಯಾಲಯದ ಮೆಟ್ಟಿಲೇರಲು ಸಹ ಅವರು ಚಿಂತನೆ ನಡೆಸಿದ್ದಾರೆ.

ರಾಜಕೀಯ ಅಸ್ಥಿರತೆ, ಪಕ್ಷಗಳ ಕಚ್ಚಾಟ, ಶಾಸಕರುಗಳ ಕಪ್ಪೆಯ ಜಿಗಿದಾಟ ಅವರುಗಳನ್ನು ಉಳಿಸಿಕೊಳ್ಳಲು ನಾಯಕರುಗಳ ಹೋರಾಟ ….. ಹೀಗೆ ಚೀತ್ಕಾರ ಗಳ ನಡುವೆ ಕೋಮು ಸ್ಥಿತಿಗೆ ತಲುಪಿರುವ ರಾಜ್ಯದ ಮೈತ್ರಿ ಸರ್ಕಾರದಲ್ಲಿ ಗಂಟೆಗೊಂದು ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಾ ರಾಜ್ಯದ ನಾಗರೀಕರಲ್ಲಿ ಜಿಗುಪ್ಸೆ ಮೂಡಿಸಿರುವ ಇಂಥ ಸ್ಥಿತಿಯಲ್ಲಿ ನಾಯಿ ಮಾಲೀಕರ ಆಲೋಚನೆ ಸ್ವಾಗತಾರ್ಹ ಅನಿಸುವುದಿಲ್ಲವೇ ?

ಇಂದಿನ ರಾಜಕೀಯ ವಿದ್ಯಮಾನಗಳನ್ನೆಲ್ಲಾ ಗಮನಿಸುತ್ತಿರುವ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಏನು ಅರಿವಿಲ್ಲದಂತೆ ಇಂದು ನನ್ನನ್ನು ಪ್ರಶ್ನಿಸಿದರು. ನಮ್ಮ ಡಿಟಿಪಿ ಸೆಂಟರ್ನಲ್ಲಿ ಪುಟವಿನ್ಯಾಸಕ್ಕೆ ತೆರಳಿದ ಸಂದರ್ಭದಲ್ಲಿ ಅವರ ಮಕ್ಕಳಿಂದ ನನಗೊಂದು ಪ್ರಶ್ನೆ ಬಂತು “ಅಂಕಲ್ ಈಗ ನಮ್ಮ ರಾಜ್ಯದ ಶಿಕ್ಷಣ ಸಚಿವರು
ಯಾರು” ? ಎಂದು ಅವರಿಗೆ ಪಾಠವೊಂದರೆ ಕೊನೆಯಲ್ಲಿ ನೀಡಿದ್ದ ಹೋಂ ವರ್ಕ ನಲ್ಲಿ ಈ ಪ್ರಶ್ನೆ ಕೇಳಲಾಗಿತ್ತು.

ಇಂಥ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುತ್ತಿದ್ದ ನನಗೆ ಈಗ ಸಚಿವರಿರುವರೇ ? ಅವರು ರಾಜೀನಾಮೆ ನೀಡಿರುವರಲ್ಲ? ಒಂದು ವೇಳೆ ನಾನು ಯಾರದು ಹೆಸರು ಹೇಳುವುದು ದಿನಬೆಳಗಾದರೆ ಸರ್ಕಾರವೇ ಉರುಳಿ ಹೋಗುವುದು ಅಥವಾ ಸಂಪುಟ ಪುನರ್ ರಚನೆ ಯಾಗಿ ಬೇರೊಬ್ಬರು ಶಿಕ್ಷಣ ಸಚಿವರಾಗುವುದು….. ಇತ್ಯಾದಿ ಪ್ರಶ್ನೆಗಳು ಮೂಡಿದವು.
ಸರಿ ಉತ್ತರ ನೀಡಲು ನನ್ನ ಮೆದುಳು ಒಪ್ಪಲಿಲ್ಲ ಸದ್ಯದ ರಾಜಕೀಯ ಪರಿಸ್ಥಿತಿ ವಿವರಿಸಿದರು ಅರ್ಥ ಮಾಡಿಕೊಳ್ಳುವ ವಯಸ್ಸು ಅವರದಲ್ಲ ಹಾಗಾಗಿ ನಾನು ಸಹ ನಮ್ಮ ಸ್ಪೀಕರ್ ಥರ ಉತ್ತರ ಹೇಳುವುದನ್ನು ( ಶಾಸಕರುಗಳ ರಾಜೀನಾಮೆ ಅಂಗೀಕಾರದ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಸ್ಪೀಕರ್ ಮುಂದೆ ಹಾಕುತ್ತಿರುವ ವರಲ್ಲ ಆ ರೀತಿ)ಮುಂದೆ ಹಾಕಿಬಿಟ್ಟೆ.

-ಜೆ. ಎಂ.ಆರ್. ಆರಾಧ್ಯ

Leave a Reply

Your email address will not be published. Required fields are marked *