ವೈ ರಾಮಪ್ಪ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆ ವೀರಶೈವ ಲಿಂಗಾಯತರ ಒಗ್ಗಟ್ಟಿಗೆ ಸಾಕ್ಷಿಯಾಯಿತೆ?

ಲಿಂಗಾಯಿತ ವೀರಶೈವ ಎರಡನ್ನು ವಿಭಜಿಸಿ ಒಗ್ಗಟ್ಟು ಮುರಿಯಲು ಯತ್ನಿಸಿದ ಪ್ರಯತ್ನಗಳು ಎಲ್ಲರಿಗೂ ತಿಳಿದದ್ದೇ ಆಗಿದೆ .ಮಠಾಧೀಶರು ಹಾಗೂ ವಿವಿಧ ಪೀಠಾಧೀಶರುಗಳು ಸಹ ಇವೆರಡರಲ್ಲಿ ಒಂದನ್ನು ಹಿಡಿದು ಜಗ್ಗಾಡಿದ್ದು ನೆನಪಿದೆ. ಕೆಲವರು ಮಾತ್ರ ಎರಡೂ ಒಂದೇ ಎಂಬ ತತ್ವದಡಿ ಮುನ್ನಡೆದದ್ದು ತಿಳಿದಿದೆ. ಈ ಸಂದರ್ಭದಲ್ಲಿ ಹಿರಿಯರು ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಆಗಿರುವ ಡಾ. ಶಾಮನೂರು ಶಿವಶಂಕರಪ್ಪ ಅವರು ತಾಳಿದ ನಿಲುವು ಮತ್ತು ಏನೇ ಆದರೂ ಇವೆರಡನ್ನು ಪ್ರತ್ಯೇಕಗೊಳಿಸಲು ಯಾವ ಕಾರಣಕ್ಕೂ ನಾನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಬಿಗಿಯಾಗಿ ನಿಂತ ಸಂದರ್ಭವನ್ನು ವೀರಶೈವ ಲಿಂಗಾಯತರು ಮರೆಯಬಾರದು. ಪಕ್ಷ ಹಾಗೂ ಅಧಿಕಾರ ಆಮೇಲೆ ಆದರೆ ಧರ್ಮವನ್ನು ಒಡೆಯಲು ಮಾತ್ರ ಬಿಡುವುದಿಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಡಾ. ಶಿವಶಂಕರಪ್ಪ ಗುಡುಗಿದ್ದು ನಿನ್ನೆ ನಗರದಲ್ಲಿ ವೀರಶೈವ ಒಳ ಪಂಗಡಗಳಲ್ಲೂ ಯಶಸ್ವಿಗೊಳಿಸಿದ ಒಂದು ಪ್ರತಿಭಟನಾ ಮೆರವಣಿಗೆಗೆ ಸಾಕ್ಷಿಯಾಯಿತು.

ಹೌದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ ರಾಮಪ್ಪ ಅವರು ನೇರ್ಲಿಗೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಕುರಿತು ಆಡಿರುವ ಕೆಲ ಅವಹೇಳನಕಾರಿ ಮಾತುಗಳ ವಿಡಿಯೋ ವಾಟ್ಸಾಪ್ ಹಾಗೂ ಫೇಸ್ ಬುಕ್ ಗಳಲ್ಲಿ ಹರಿದಾಡಿದ್ದೆ ತಡ ಕೇವಲ 24 ಗಂಟೆಗಳೊಳಗಾಗಿ ಸಹಸ್ರಾರು ಜನರನ್ನು ಸಂಘಟಿಸಿ ಆತನ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆ ನಿನ್ನೆಯಷ್ಟೇ ನಡೆಯಿತು. ಈ ಪ್ರತಿಭಟನೆಯಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಬಹುತೇಕ ಯುವ ಮುಖಂಡರು ಪಾಲ್ಗೊಂಡಿದ್ದು,” ನಾವು ಎಂದೂ ಒಂದೇ “ಎಂಬುದನ್ನು ಸಮಾಜಕ್ಕೆ ಹಾಗೂ ಎರಡು ಸಮಾಜಗಳ ಮುಖಂಡರುಗಳಿಗೆ ಸಾರಿದಂತಿತ್ತು.

ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ, ವಾಗ್ವಾದ ಇದ್ದವುಗಳೆ ಆದರೆ ಒಂದು ನಿಗದಿತ ಸಮುದಾಯವನ್ನು ಉಲ್ಲೇಖಿಸಿ ಅವಹೇಳನಕಾರಿ ಮಾತುಗಳನ್ನಾಡಿದರೆ ಯಾವುದೇ ಸಮಾಜ ಸುಮ್ಮನಿರುತ್ತದೆಯೇ? ಅದರಲ್ಲೂ ವೀರಶೈವ ಲಿಂಗಾಯಿತ ಸಮಾಜದ ಕುರಿತು ಇಂಥ ಮಾತುಗಳನ್ನಾಡಿದರೆ ದಾವಣಗೆರೆ ಜಿಲ್ಲೆಯಲ್ಲಿ ಪರಿಣಾಮವಂತೂ ನೆಟ್ಟಗಿರುವುದಿಲ್ಲ ಎಂಬುದನ್ನು ಈ ಪ್ರತಿಭಟನೆ ಎಚ್ಚರಿಸಿತು.
ನಾನು ವೀರಶೈವ ಹಾಗೂ ಲಿಂಗಾಯತ ಪದವನ್ನು ಬಳಸಿ ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ವೈ ರಾಮಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಬದಲಿಗೆ ಜಾತಿ ಹಿಡಿದು ತಮ್ಮನ್ನೇ ಕೆಲವರು ನಿಂದಿಸಿದರು ಎಂದು ಹೇಳಿಕೊಂಡಿರುವ ಅವರು ಈ ಕುರಿತು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಬಹುಶಃ ಅವರ ಮಾತುಗಳಿಗೆ ಸಾಕ್ಷಿ ಇರಲಾರದು. ಈ ನಡುವೆ ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ (ಎಚ್ ಆಂಜನೇಯ ಅಳಿಯ) ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯಾರೂ ಕೂಡ ಜಾತಿ ನಿಂದಿಸುವ ಕೆಲಸವನ್ನು ಮಾಡಿಲ್ಲ.

ಈ ಘಟನೆ ನೇರ್ಲಿಗೆ ಹಾಗೂ ವೈ ರಾಮಪ್ಪಗೆ ಸಂಬಂಧಿಸಿದ್ದಷ್ಟೇ ಆಗಿದ್ದು, ಆತ ವೈಯಕ್ತಿಕ ಪ್ರತಿಷ್ಠೆಗಾಗಿ ವೀರಶೈವ ಲಿಂಗಾಯಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ಹುಳಿ ಹಿಂಡುವ ಕೆಲಸ ಮಾಡಿದ್ದು, ಆತನನ್ನು ತಕ್ಷಣವೇ ಪಕ್ಷದಿಂದ ವಜಾ ಮಾಡಬೇಕು ಎಂದು ನೇರವಾಗಿಯೇ ಹೇಳಿದ್ದಾರೆ, ಇಲ್ಲಿ ಬಸಂತ್ ಕುರಿತು ಒಂದು ಮಾತನ್ನು ನಾನು ಹೇಳಬೇಕಿದೆ. ಜಾತಿ ನಿಂದನೆ ಪ್ರಕರಣಗಳ ದುರುಪಯೋಗ ಆಗುತ್ತಿದ್ದ ಸಂದರ್ಭದಲ್ಲಿ ಎಷ್ಟೋ ಸಲ ಬಸಂತ್ ಅವರೇ ಪೊಲೀಸ್ ಠಾಣೆಗಳಿಗೆ ತೆರಳಿ ರಾಜಿ ಮೂಲಕ ಹತ್ತಾರು ಘಟನೆಗಳನ್ನು ಬಗೆಹರಿಸಿರುವುದು ನನಗೆ ಗೊತ್ತು. ಎಲ್ಲ ಸಮಾಜ ಬಾಂಧವರೊಂದಿಗೆ( ಪಕ್ಷ ಯಾವುದೇ ಇರಲಿ) ಅನ್ಯೋನ್ಯವಾಗಿ ಇರುವ ಬಸಂತ್ ಆನಗೋಡು ಕ್ಷೇತ್ರದಲ್ಲೂ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಈ ವಿಷಯದಲ್ಲಿ ಅವರು ನಿಜಕ್ಕೂ ಅವರ ಮಟ್ಟದ ಇತರ ಹಿಂದುಳಿದ ವರ್ಗಗಳ ಮುಖಂಡರಿಗೆ ಮಾದರಿಯೆ ಸರಿ. ಯಾವುದೇ ಮಠಾಧೀಶರು ವೀರಶೈವ ಅಥವಾ ಲಿಂಗಾಯತ ಇವೆರಡರಲ್ಲಿ ಒಂದನ್ನು ಮಾತ್ರ ಬೆಂಬಲಿಸಿದರೂ ಸರಿಯೇ ಆದರೆ ನಾವು ಮಾತ್ರ ಒಗ್ಗಟ್ಟಾಗಿಯೇ ಇರುವವರು ಎಂಬುದನ್ನು ನಿನ್ನೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಸಾಬೀತುಪಡಿಸಿತು. ಈ ಕಾರಣಕ್ಕಾಗಿ ತುರ್ತು ಅವಧಿಯಲ್ಲೇ ಇದನ್ನು ಸಂಘಟಿಸಿದ ಯುವ ಮುಖಂಡರುಗಳು ಅಭಿನಂದನಾರ್ಹರು ಎಂಬುದು ಬಹುತೇಕ ವೀರಶೈವ ಲಿಂಗಾಯತರ ಅಂಬೋಣ.
– ಜಿ.ಎಂ.ಆರ್ ಆರಾದ್ಯ

Leave a Reply

Your email address will not be published. Required fields are marked *