ಲೋಕಸಭಾ ಚುನಾವಣೆ ಫಲಿತಾಂಶ ವಿಳಂಬ:ಏಕೆ ಗೊತ್ತೇ?

ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆ ಮತ ಎಣಿಕೆ ಸಂದರ್ಭ ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಹಾಕುವಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕಾಗಿರುವುದರಿಂದ ಮತ ಎಣಿಕೆ ನಿಧಾನವಾಗಲಿದ್ದು, ಫಲಿತಾಂಶವೂ ವಿಳಂಬವಾಗಲಿದೆ.

ಸುಪ್ರೀಂ ಕೋರ್ಟ್ ನಿರ್ದೇನದಂತೆ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕಾಗಿದ್ದು ಇದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು. ಒಂದು ವಿವಿಪ್ಯಾಟ್ನ ಚೀಟಿ ಎಣಿಕೆ ಕನಿಷ್ಠ 45 ನಿಮಿಷ ಬೇಕು.

ಎಲ್ಲಾ 5 ವಿವಿಪ್ಯಾಟ್ ಎಣಿಕೆಗೆ ಕನಿಷ್ಠ 3 ರಿಂದ 4 ಬೇಕು. ಇದು ಅಂತಿಮ ಫಲಿತಾಂಶ ವಿಳಂಬವಾಗಲು ಪ್ರಮುಖ ಕಾರಣ. ಇದರಿಂದ ಎಲ್ಲಾ 28 ಲೋಕ ಸಭಾ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಹೊರಬೀಳುವಾಗ ಸಂಜೆ ಆಗಬಹುದು.

ಈ ಬಾರಿ ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಹಾಕಬೇಕಾಗಿರುವುದರಿಂದ ಮತ ಎಣಿಕೆಯ ಕೊನೆಯಲ್ಲಿ ಕೇಂದ್ರದಲ್ಲಿರುವ 14 ಟೇಬಲ್ಗಳ ಪೈಕಿ ಕೊನೆಯ ಟೇಬಲ್ನ ವಿವಿಪ್ಯಾಟ್ನಲ್ಲಿನ ಮುದ್ರಿತ ಚೀಟಿಗಳನ್ನು ತಾಳೆ ಮಾಡಲಾಗುತ್ತದೆ. ಇದು ಮುಗಿದ ಬಳಿಕವಷ್ಟೇ ಅಂತಿಮ ಫಲಿತಾಂಶ ಪ್ರಕಟ ರಾತ್ರಿ 8 ಗಂಟೆ ಆಗಬಹುದು ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ.

ಈ ಹಿಂದೆ ಒಂದು ವಿಧಾನ ಸಭಾ ಕ್ಷೇತ್ರದ ಯಾವುದಾದರು ಒಂದು ಮತಗಟ್ಟೆ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಹಾಕಲಾಗುತ್ತಿತ್ತು ಈಗ ಪ್ರತಿ ವಿಧಾನ ಸಭಾ ಕ್ಷೇತ್ರದ5 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಹಾಕುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಜತೆಗೆ ಎಣಿಕೆ ಆರಂಭವಾದ ಬಳಿಕ ಕೆಲವು ತಾಂತ್ರಿಕ ಕಾರಣಗಳು ಎದುರಾಗುತ್ತವೆ. ಕೆಲವು ಕಡೆ ಅಭ್ಯರ್ಥಿಗಳು ಹೆಚ್ಚಿರುತ್ತಾರೆ. ಈ ಎಲ್ಲಾ ಅಂಶಗಳಿಂದಾಗಿ ಫಲಿತಾಂಶ ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಬಂದಿಗೆಬೇಕಾದ ಅಗತ್ಯ ತರಬೇತಿ ಕೊಡಲಾಗಿದ್ದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳುತ್ತಾರೆ.

1,120 ಮತಗಟ್ಟೆಗಳಲ್ಲಿ ‘ಮತ ತಾಳೆ’
ರಾಜ್ಯದ 28 ಲೋಕಸಭಾ ಕ್ಷೇತ್ರಗಳವ್ಯಾಪ್ತಿಯಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿದ್ದು, 58,186 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಗ ಸುಪ್ರೀಂ ಆದೇಶದಂತೆ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ 5ರಂತೆ; 28 ಲೋಕ ಸಭಾ ಕ್ಷೇತ್ರಗಳಲ್ಲಿ 40 ರಂತೆ ಒಟ್ಟು 1,120 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತ ತಾಳೆ ಮಾಡಬೇಕಾಗಿದೆ. ಇಕ್ಕಾಗಿ ಹೆಚ್ಚುವರಿ 5 ಸಾವಿರ ಸಿಬಂದಿ ಮತ್ತು 3 ತಾಸು ಹೆಚ್ಚುವರಿ ಸಮಯ ಬೇಕಾಗುತ್ತದೆ.

ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಮತ ಎಣಿಕೆ ಸಾಕಷ್ಟು ಸಮಯ ಹಿಡಿಯಲಿದೆ. ಒಂದು ವಿವಿಪ್ಯಾಟ್ ಚೀಟಿಗಳ ಎಣಿಕೆ ಕನಿಷ್ಠ 45 ನಿಮಿಷ ಬೇಕು. ಹೀಗಾಗಿ ಈ ಬಾರಿ ಒಟ್ಟಾರೆ ಅಂತಿಮ ಫಲಿತಾಂಶ ಹೊರಬರಲು ರಾತ್ರಿ 8 ಗಂಟೆ ಆಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *