ಕುಮಾರಸ್ವಾಮಿ ಅವರೇ ನೀವು ಹೀಗೇಕೆ ಬದಲಾದಿರಿ…?
ನಾನೊಬ್ಬ ಪತ್ರಕರ್ತ,ಈ ಕ್ಷೇತ್ರದಲ್ಲಿ 3 ದಶಕಗಳಿಂದ ಮಣ್ಣು ಹೊರುತ್ತಿದ್ದೇನೆ.
ನಾನೀಗ ಹೇಳುತ್ತಿರುವುದೆಲ್ಲ ಸತ್ಯ ಎಂದು ಆ ಕಾಲಭೈರವನ ಮೇಲೆ ಪ್ರಮಾಣ ಮಾಡುತ್ತೇನೆ.
ನಾನು ಕಂಡಂತೆ ವಿರೇಂದ್ರಪಾಟೀಲ ಅವರ ಬಳಿಕ ನಾನು ರಾಜ್ಯದಲ್ಲಿ ಕಂಡ ಇನ್ನೊಂದು ಕಳಕಳಿಯ ಸರ್ಕಾರ ಎಂದರೆ ನಿಮ್ಮ ಹಾಗೂ ಬಿಜೆಪಿ ನಡುವೆ ಒಪ್ಪಂದದ ನಡುವೆ ನಡೆದ 20-20 ಅವಧಿ.ಬಹುಶಃ ಇದನ್ನು ರಾಜ್ಯದ ಹೆಚ್ಚು ಜನ ಒಪ್ಪುವರು ಎಂದುಕೊಳ್ಳುತ್ತೇನೆ.
ಆ ದಿನಗಳವರೆಗೂ ನೀವು ನಿಮ್ಮತನ ಉಳಿಸಿಕೊಂಡು ಬಂದಿರಿ.ಅಂದು ನೀವು ಮಾತಿನಂತೆ ನಡೆದು ಉಳಿದ ಅವಧಿಗೆ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದರೆ ನೀವು ದೊಡ್ಡವರಾಗುತ್ತಿದ್ದಿರಿ.ಅನೇಕರ ಅಭಿಪ್ರಾಯ ಒಂದು ವೇಳೆ ನೀವು ಹಾಗೆ ನಡೆದುಕೊಂಡಿದ್ದರೆ ಕನಿಷ್ಠ ಇನ್ನು 4 ಅವಧಿಗಾದರು ನೀವಿಬ್ಬರೂ ಅಧಿಕಾರದಲ್ಲಿ ಇರುತ್ತಿದ್ದಿರಿ.
ನಿಜ,ನಿಮ್ಮ ತಂದೆಯವರಂತೆ ಬಿಜೆಪಿ ಸಹವಾಸವೇ ಬೇಡ ಎನ್ನುವುದಾದರೆ ಅದನ್ನು ನೀವು 20-20 ಒಪ್ಪಂದಕ್ಕೂ ಮೊದಲೇ ನಿರ್ಧರಿಸಬೇಕಿತ್ತಲ್ಲವೇ?
ಇರಲಿ,ನನಗೆ ರಾಜಕೀಯದ ಒಳ ಹೊಡೆತಗಳು,ಜಾತಿ ಲೆಕ್ಕಾಚಾರದ ಅರಿವು ಅಷ್ಟಕ್ಕಷ್ಟೇ.
ಎಲ್ಲ ಪಕ್ಷಗಳಲ್ಲೂ ಸಜ್ಜನರು, ದುರ್ಜನರು ಇದ್ದೇ ಇರುವರು.ಹಾಗೇ ನಿಮ್ಮ ಪಕ್ಷದಲ್ಲಿ ನಿಮ್ಮ ರಾಷ್ಟ್ರೀಯ ಅಧ್ಯಕ್ಷರಿಗಿಂತಲು ನಿಮ್ಮ ಮೇಲೆ ಜನಕ್ಕೆ ನಂಬಿಕೆ,ವಿಶ್ವಾಸ ಇತ್ತು.ನಿಮ್ಮ ಮಾತುಗಳಲ್ಲಿ ತೂಕ ಇತ್ತು,ರಾಜ್ಯದ ರೈತರ ಕುರಿತು ಕಳಕಳಿ ಇತ್ತು.(ಇಂದು ಇಲ್ಲ ಎಂದು ಹೇಳುತ್ತಿಲ್ಲ).ನಿಮ್ಮ ವ್ಯಕ್ತಿತ್ವ ಮಾದರಿಯಾಗಲಿ ಎಂದು ನಾನು ಅಂದುಕೊಂಡದ್ದು ಉಂಟು.ಬಹುಶಃ ಕಾಂಗ್ರೆಸ್ ಜೊತೆಗೆ ಸೇರಿ ನೀವು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆದಾಗಲು ಸಹ ಬದಲಾಗಿರಲಿಲ್ಲ.ಕೇವಲ 39 ಶಾಸಕರನ್ನು ಹೊಂದಿದ್ದರಿಂದ ನೀವು ಆ ಸ್ಥಾನ ಪಡೆಯಲಾರಿರಿ ಎಂದುಕೊಂಡೆ.ಏಕೆಂದರೆ ಅದು ನೈತಿಕ ಬಲ ನೀಡದು ಎಂದು.ಆದರೂ ಕೊರಗುತ್ತಾ,ಗುನುಗುತ್ತಾ,ಹಾಗೂ ಹೀಗೂ ಕೆಲ ತಿಂಗಳು ನಡೆಸಿದಿರಿ.ಬಹಿರಂಗವಾಗಿಯೇ ಇದು ನನ್ನ ಸರ್ಕಾರ ಅಲ್ಲ ಎಂದು ಅಳಲು ತೋಡಿಕೊಂಡಿರಿ..ಇರಲಿ.
ಇಂಥ ಸಂಧರ್ಭದಲ್ಲಿಯು ತಾಳ್ಮೆಯಿಂದ ವರ್ತಿಸುವ ನೀವು ಈಗ ಹೀಗೇಕೆ ಆದಿರಿ ಎಂಬುದೇ ಆಶ್ಚರ್ಯ.
ನಿಮ್ಮ ಪುತ್ರ ನಿಖಿಲ್ ಅವರನ್ನು ಮಂಡ್ಯ ಅಭ್ಯರ್ಥಿ ಆಗಿ ಪ್ರಕಟಿಸಿದ ಬಳಿಕ ಅದರಲ್ಲೂ ಸುಮಲತಾ ಅಂಬರೀಷ್ ಅವರು ಸ್ಪರ್ದಿಸಿದ ಬಳಿಕ ನೀವು ತಾಳ್ಮೆ ಕಳೆದುಕೊಂಡು ಬಿಟ್ಟಿರಿ.ನಿಮ್ಮ ಕೋಟಾದ ಎಂಪಿ ಸೀಟುಗಲ್ಲಿ ಶೇ.40 ರಷ್ಟನ್ನು ತಾತ ಹಾಗೂ ಮೊಮ್ಮೊಕ್ಕಳಿಗೆ ನೀಡಿದರೆ ಈ ಭಾಗದ ಜನತೆ ಏನೆಂದುಕೊಂಡಾರು ಎಂಬ ಚಿಕ್ಕ ಇರುಸುಮುರುಸು ಸಹ ನಿಮ್ಮ ಕುಟುಂಬಕ್ಕೆ ಆಗಲಿಲ್ಲವೇ?
ಅದೂ ಇರಲಿಬಿಡಿ,ನಿಮ್ಮ ಹಾಗೂ ನಿಮ್ಮ ಸಹೋದರನ ನಾಲಿಗೆ ಹೀಗೇಕೆ ಆಯಿತು?
ಗೋಲಿ ಆಡುವ ಮಕ್ಕಳನ್ನು ದುರಗುಟ್ಟಿಕೊಂಡು ತಂದು ಎಂಪಿ ಚುನಾವಣೆಗೆ ನಿಲ್ಲಿಸುವ ಅಗತ್ಯ ಇತ್ತೇ?..ಅವರುಗಳಿಗೆ ಇನ್ನು ಸಾಕಷ್ಟು ಸಮಯ ಇತ್ತು..ಇರಲಿ,ತಮ್ಮ ಕ್ಷೇತ್ರವನ್ನು ಮೊಮ್ಮಗನಿಗೆ ಧಾರೆ ಎರೆದ ಬಳಿಕ ದೊಡ್ಡ ಗೌಡರು ಸುಮ್ಮನಿದ್ದುಬಿಡಬಹುದಿತ್ತು.ಆದರೆ ತುಮಕೂರಿನಲ್ಲಿ ಹಾಲಿ ಎಂಪಿ ಒಬ್ಬರ ಜಾಗವನ್ನು ಕಿತ್ತುಕೊಂಡದ್ದು ಎಸ್ಟುಸರಿ?
ಶಿವರಾಮೆಗೌಡ ಹಾಗೂ ಎಚ್ ಎಚ್.ಡಿ. ರೇವಣ್ಣ ಆವರು ಆಡಿರುವ ಮಾತುಗಳೇ ಅತಿರೇಕದ್ದು ಎನ್ನಿಸಿತ್ತು.ಆದರೆ ಮಗನನ್ನು “ಹೇಗಾದರೂ”ಮಾಡಿ ಗೆಲ್ಲಿಸಬೇಕು ಎಂಬ ಹಠದಲ್ಲಿ ನೀವು ತಾಳ್ಮೆ ಕಳೆದುಕೊಂಡಿರಿ.
ನಾನು ಸುಮಲತಾ ಅವರ ಪರ ಮಾತಾಡುತ್ತಿಲ್ಲ.ನೀವು ಹೇಗೆ ಬದಲಾಗುತ್ತಿದ್ದೀರಿ ಎಂಬುದನ್ನು ಗಮನಕ್ಕೆ ತರುತ್ತಿದ್ದೇನೆ.
ಪ್ರಚಾರದ ಅಬ್ಬರ ಹಾಗೂ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ನಿಮಗೆ ನೀವು ಏನು ಹೇಳಿದಿರಿ,ಹೇಳುತ್ತಿದ್ದೀರಿ ಎಂಬುದರ ಪರಿವೇ ಇಲ್ಲವಾಗಿದೆ.ಒಂದೇ ಒಂದು ಗಂಟೆ ಬಿಡುವುಮಾಡಿಕೊಂಡು ಅದೆಲ್ಲವನ್ನು ನೋಡಿ.ಬಹುಶ ನಿಮ್ಮ ಬಗ್ಗೆ ನಿಮಗೇ ಜಿಗುಪ್ಸೆ ಮೂಡಬಹುದು.
ರಾಜಕೀಯಕ್ಕೆ ಹೊಸಬರಾದರು ಸುಮಲತಾ ಎಂದು ನಾಲಿಗೆ ಹರಿಬಿಡಲಿಲ್ಲ.”ಗಂಡ ಸತ್ತ ಒಂದೇ ತಿಂಗಳಿಗೆ ಈ ಯಮ್ಮ ರಾಜಕೀಯಕ್ಕೆ ಬಂತು”ಎಂದು ನಿಮ್ಮ ಸಹೋದರ ಹಾಗೂ ಭಂಡ ಹೇಳಿದಾಗಲು ಸುಮಲತಾ ತೀವ್ರವಾಗಿ ಪ್ರತಿಕ್ರಿಯಿಸಲಿಲ್ಲ,”ಸಿನೆಮಾದಲ್ಲಿ ಬಣ್ಣ ಹಚ್ಚಿ ಅತ್ತಿದ್ದು ಆಯ್ತು ,ಈಗ ಇಲ್ಲಿ ಬಂದಿದ್ದಾರೆ”ಎಂದು ನೀವು ಹೇಳುವಾಗ ,ನೀವು ಸಹ ಸಿನೆಮಾ ನಿರ್ಮಾಪಕ ಎಂಬುದನ್ನು ಮತ್ತು ಇದೆ ಸಿನೇಮಾದಲ್ಲೇ ಬಣ್ಣ ಹಚ್ಚಿ ನಟಿಸಿದ್ದ ಹೆಣ್ಣೊಂದನ್ನು ವರಿಸಿ ವಿವಾಹ ಆದದ್ದು ನೆನಪಿಗೆ ಬರಲಿಲ್ಲವೇ?
ತಕ್ಷಣ ನೋಡಿದರೆ ಹೆಣ್ಣೋ ಅಥವಾ ..ಗಂಡೂ ಎಂದು ಹೇಳಲು ಆಗದಂಥ ಶಿವರಾಮೇಗೌಡ ಏನು ಹೇಳುತ್ತಿದ್ದಾರೆ ನೋಡಿದ್ದೀರಾ?
ಯಶ್ ಹಾಗೂ ದರ್ಶನ್ ಕುರಿತು ನಿಮ್ಮ ಒಬ್ಬ ಎಂಎಲ್ಎ ಹೇಳ್ತಾನೆ”ಸರ್ಕಾರ ನಮ್ದು, ಎನ್ ಮಾಡ್ತೀವಿ ನೋಡಿ”ಅಂತ.ಅಂದ್ರೆ ಇವರಪ್ಪಂದ ಅದು?
ಒಂದು ತಿಳಿದುಕೊಳ್ಳಿ,.ನಮಗೆಲ್ಲ ಬೇರೆ ಬೇರೆ ಕೆಲಸ ಇರೋದ್ರಿಂದ ಮತ್ತು ನಮ್ಮಂಥವರು ದುಡಿದೇ ತಿನ್ನಬೇಕಾಗಿರುವುದರಿಂದ ಈಗಾಗಲೇ ದುಂಡುಗೆ ಆಗಿರೋ ಮಂದಿಯನ್ನು ಅನಿವಾರ್ಯವಾಗಿ ಆರಿಸಿ ಕಳುಹಿಸುತ್ತಿದ್ದೀವಿ.
ಲಾಲ್ ಬಹದ್ದೂರ್ ಶಾಸ್ತ್ರೀ, ಕಾಮರಾಜರ್,ವಾಜಪೇಯಿ ಅವರಂಥ ಮಹಾನುಭಾವರ ಕಾಲಿನ ಧೂಳಿಗೂ ಸಮ ಅಲ್ಲದ ಇಂದಿನ ರಾಜಕಾರಣಿಗಳ ಬಗ್ಗೆ ದನಕಾಯುವ ಹುಡುಗನಿಗೂ ಗೊತ್ತು ಅವರ ನಿಯತ್ತು ಎಂಥದ್ದು ಎಂಬುದು.
ಇರಲಿ,ಇನ್ನಷ್ಟು ದಿನ ಚಿನ್ನಿದಾಂಡು,ಗೋಲಿ ಆಡಿಕೊಂಡು ಇರಬೇಕಾಗಿದ್ದ ಮಗನನ್ನು ಅಂತೂ ಅಖಾಡಕ್ಕೆ ತಂದಿದ್ದೀರಿ.ಪ್ರಚಾರ ಮಾಡುವುದು ನಿಮ್ಮ ಕರ್ತವ್ಯ, ಮಾಡಿ.ಆದರೆ ಇತರೆ ಅಭ್ಯರ್ಥಿ ಗಳ ವಿರುದ್ಧ ಹಾಗೂ ಅವರ ಪರ ಪ್ರಚಾರಕ್ಕೆ ಬರುವವರ ಬಗ್ಗೆ ಮಾತನಾಡುವಾಗ ಸ್ಥಿಮಿತ ಇರಲಿ.ನೀವು ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರುವವರು ಇದ್ದೇ ಇರುತ್ತಾರೆ ಎಂಬುದು ನೆನಪಿರಲಿ.
ಅಷ್ಟು ಮಾಡಿದ್ದೇವೆ,ಇಷ್ಟು ಮಾಡಿದ್ದೇವೆ ಎಂದು ನಿವಷ್ಟೇ ಅಲ್ಲ ಇತರೆ ಜನಪ್ರತಿನಿಧಿಗಳು ಹೇಳಿದಾಗ ನಗು ಬರುತ್ತೆ.ನಿಮ್ಮ ಅಪ್ಪನ ಮನೆಯಿಂದ ತಂದು ಮಾಡಿದ್ದೀರಾ ಎಂದು ಕೊರಳಪಟ್ಟಿ ಹಿಡಿದು ಕೇಳಬೇಕು ಅನ್ನಿಸುತ್ತೆ..ದಶಕಗಳ ಹಿಂದಷ್ಟೇ ರಾಜಕೀಯದಲ್ಲಿ ಒಂದಿಷ್ಟು ಮೌಲ್ಯ, ನಾಚಿಕೆ,ಮಾನ,ಮರ್ಯಾದೆ ಇತ್ತು.ಈಗ ಅದರ ಶೇ.1 ರಷ್ಟು ಇಲ್ಲ.ಲಂಕೇಶ್ ಅವರು ಹೇಳುತ್ತಿದ್ದರು,”ಎಲ್ಲಾ ಹೇಲುಗುಪ್ಪೆಗಳೇ,ಯಾವುದು ಕಡಿಮೆ ಎಂಬುದನ್ನು ಹುಡುಕಬೇಕು ಅಷ್ಟೇ”ಎಂದು.
ಕುಮಾರಸ್ವಾಮಿ ಸಿಎಂ ಆದ್ರೆ ನನ್ ತಲೆ ಕಡಿದು ನಿಮ್ ಮುಂದೆ ಇಡ್ತೀನಿ ಅಂತ ಜಮೀರ್ ಅಹ್ಮದ್ ಹೇಳಿದ್ರು.ನಿಮ್ಮ ಸಂಪುಟದಲ್ಲೇ ಮಂತ್ರಿ ಮಾಡಿದ್ರಿ.ಕೋಮುವಾದಿ ಬಿಜೆಪಿಯನ್ನು,ಅವಕಾಶವಾದಿ ಜೆಡಿಎಸ್ ಅನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂದು ಇದೆ ಸಿದ್ರಾಮಯ್ಯ ದಾವಣಗೆರೆಯಲ್ಲಿ ಮಾತನಾಡಿದ ವಿಡಿಯೋ ನನ್ನಬಳಿ ಈಗಲೂ ಇದೆ.ಈಗ ನಿಮ್ಮ ಸಹೋದರ ಒಂದು ಮಾತು ಹೇಳಿದ್ದಾರೆ,”ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದರೆ ರಾಜಕೀಯ ನಿವೃತ್ತಿ ಪಡೆಯುತೇನೆ”ಅಂತ…ಹೌದು ಅವರ ಜಾಗಕ್ಕೆ ಪಕ್ಕದ ಮನೆ ಪುಟ್ಟಣ್ಣ ಅಥವಾ ಎದುರಿನ ಮನೆ ಎಂಕಣ್ಣ ಬರ್ತಾರ?.. ಬರುವುದು ಮತ್ತೆ ರಕ್ತ ಬಿಜಾಸುರರು ಅಲ್ಲವೇ?
ಹೌದು..ಪುಲ್ವಾಮ ದಾಳಿಬಗ್ಗೆ ಮೊದಲೇ ಗೊತ್ತಿತ್ತು ಎಂದ್ದಿದ್ದೀರಿ.ನಿಜನಾ..
ಊಟಕ್ಕೆ ಇಲ್ಲದವರು ಸೇನೆ ಸೇರ್ತಾರೆ ಅಂದಿದ್ದೀರಿ ನಿಜಾನ..
ಐಟಿ ಅವರು ನಿಮ್ಮವರ ಮೇಲೆ ದಾಳಿ ಮಾಡಿದಾಗ ಏನು ಸಿಗಲಿಲ್ಲವಂತೆ..ನಿಜಾನ..
ಎಷ್ಟು ತಿಳಿದುಕೊಂಡಿದ್ದೀರಿ ನೋಡಿ.ಸುಮ್ನೆ ಜನ ಅದು ಇದು ಮಾತಾಡ್ತಾರೆ.
ಮರೆತಿದ್ದೆ,ಇನ್ನೊಂದು ವಿಷಯ.ಗೌಡರಿಗೆ ಬೇರೆ ಮಕ್ಕಳು ಇಲ್ವಾ..ನೀವು ರೇವಣ್ಣ ಇಬ್ಬರೇನ?..ನಂಗೆ ಗೊತ್ತಿಲ್ಲ.ಆದ್ರೆ ಇದ್ರೆ ತುಮಕೂರನ್ನು ಅವರಿಗೆ ಕೊಟ್ಟು ಗೌಡ್ರು ವಿಶ್ರಾಂತಿ ಮಾಡಬಹುದಿತ್ತು ಎಂಬ ಕಾರಣಕ್ಕೇ ಕೇಳಿದೆ ಅಷ್ಟೇ.
ಇನ್ನೇನು 3 ಅಥವಾ 4 ದಿನ ಬಾಕಿ ಇದೆ.ಇನ್ನಾದರೂ ನೀವೊಬ್ಬ ಮುಖ್ಯಮಂತ್ರಿ ಎಂಬಂತೆ ವರ್ತಿಸಿ.ಒಬ್ಬ ತಂದೆಯಾಗಿ ಅಲ್ಲ.ಹಾಗೊಂದು ವೇಳೆ ನೀವೇ ಹೆಚ್ಚು ಪ್ರೀತಿತೋರುತ್ತೀರಿ ಮಗನ ಬಗ್ಗೆ ಎಂದೂ ಅಂದುಕೊಳ್ಳಬೇಡಿ.ನಮ್ಮ ಮನೆಯ ಪಕ್ಕ ಒಂದು building ಕಟುತ್ತಿದ್ದಾರೆ.ಅವರ ವಾಚಮನ್ ಮಗನಿಗೆ ಕಿಡ್ನಿ ಹಾಳಾಗಿತ್ತು.ಮೊನ್ನೆಯಷ್ಟೇ ತಂದೆ ಮಗನಿಗೆ ತನ್ನ ಕಿಡ್ನಿ ಕೊಟ್ಟರು.ನೆರೆಯವರೆಲ್ಲ ಅಷ್ಟಿಷ್ಟು ಸೇರಿಸಿ ಸಹಾಯ ಮಾಡಿದೆವು.ಬಹುಶ ಆತ ತನ್ನ ಮಗನನ್ನು ಪ್ರೀತಿಸಿದಷ್ಟು ಬೆರೆಯಾವ ತಂದೆಯೂ(ನಿಮ್ಮನ್ನು ಸೇರಿಸಿ)ಪ್ರೀತಿಸಲಾರರೇನೋ ಅನ್ನಿಸಿತು.
ಹಾಗಾಗಿ ಮಗನೆಂಬ ಮೋಹ ನಿಮ್ಮ ಮೆದುಳು ಹಾಗೂ ಬಾಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಿಡುತ್ತಿಲ್ಲ ಎಂಬ ಅಭಿಪ್ರಾಯ ಅನೇಕರದು.
ನಿಮ್ಮ ವರ್ತನೆ ಇತ್ತೀಚಿಗೆ ನೀವೊಬ್ಬ ದೇಶದ ಮಾಜಿ ಪ್ರಧಾನಿ ಅವರ ಮಗ ಹಾಗೂ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ನೆನಪಿಟ್ಟುಕೊಂಡು ಸಾಗಲಿ ಎಂಬುದೇ ನನ್ನ ಆಶಯ.
ಜಿ.ಎಂ.ಆರ್.ಆರಾಧ್ಯ.