ಎಲ್ಲ ಮುಗಿದ ಬಳಿಕ ಕ್ಯಾಂಡಲ್ ಸುಟ್ಟು RIP ಹೇಳುವ ಬದಲು ಕಾಮುಕರನ್ನು ಸುಟ್ಟುಬಿಡಿ
ಮೇಲೆ ಕಾಣುತ್ತಿರುವ ಚಿತ್ರ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮದುವಿನದ್ದು. ಈಕೆಯ ಸಾವು ಸಂಭವಿಸಿ ಇಂದಿಗೆ ವಾರವೇ ಕಳೆದು ಹೋಗಿದೆ. ಮೇಲಿನ ಚಿತ್ರ ಎಂತಹ ಕಟುಕರಿಗೂ ಕಣ್ಣಾಲಿಗಳನ್ನು ಒದ್ದೆ ಮಾಡುವ ಮತ್ತು ಕರುಳು ಹಿಂಡುವ ದೃಶ್ಯ. ಈಕೆ ನಮ್ಮ ಮನೆಯ ಮಗಳಾಗಿದ್ದಿದ್ದರೆ ಹೀಗೆ ಸುಮ್ಮನೆ ಮೂಕ ಪಶುಗಳಂತೆ ನಾವು ಕೂರುತ್ತಿದ್ದೆವಾ. ಎಂತಹ ಘೋರ ಅನ್ಯಾಯ ಈ ಹೆಣ್ಣಿಗೆ .ಚುನಾವಣೆಯ ಅಬ್ಬರದಲ್ಲಿ ಯಾರಿಗೂ ಕೇಳಲಿಲ್ಲವೆ ಈಕೆಯ ಆರ್ತನಾದ? ದಿನಗಟ್ಟಲೆ ಒಂದು ವಿಷಯನಾ ಮತ್ತೆ ಮತ್ತೆ ತೋರಿಸಿ TRP ಹೆಚ್ಚಿಸಿಕೊಳ್ಳುವ ಮಾಧ್ಯಮದವರಿಗೂ ಏಕೆ ಕಿವುಡ ಯಿತೋ ತಿಳಿಯದಾಗಿದೆ? ಈ ರೀತಿಯ ಕ್ರೌರ್ಯಗಳನ್ನು ತಡೆಯುವುದಾದರು ಹೇಗೆ? ಅಮಾನುಷವಾಗಿ ನಡೆಯುತ್ತಿರುವ ಈ ದೌರ್ಜನ್ಯಕ್ಕೆ ಮುಕ್ತಿ ಎಂದಿಗೆ? ರಾಜಕೀಯ ನಾಯಕರಿಗೆ ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಪರ್ಸೆಂಟ್ ಮತದಾನ ನಡೆಯಲಿದೆ,ಯಾವ ಯಾವ ಬೂತ್ ಗಳಲ್ಲಿ ತಮಗೆ ಎಷ್ಟೆಷ್ಟು ಮತ ಲಭಿಸಬಹುದು ಎನ್ನುವ ಚಿಂತೆ ಬಿಟ್ಟರೆ ಬೇರೆ ಏನೂ ಬೇಕಿಲ್ಲ .ಜನರ ರಕ್ಷಣೆಗೆ ನಿಲ್ಲಬೇಕಿದ್ದ ಪೊಲೀಸ್ ಅಧಿಕಾರಿಗಳಿಗೆ ರಾಜಕೀಯ ಮುಖಂಡರಿಗೆ ರಕ್ಷಣೆ ನೀಡುವುದನ್ನು ಬಿಟ್ಟರೆ ಬೇರೆ ಕರ್ತವ್ಯವೇ ಕಣ್ಣಿಗೆ ಕಾಣುತ್ತಿಲ್ಲ. ಮಧುವಿನ ಪೋಷಕರು ದೂರು ನೀಡಲು ಹೋದಾಗ ದೂರನ್ನು ದಾಖಲಿಸಿ ಸೂಕ್ತ ಕ್ರಮ ಕೈಗೊಂಡು ಈಕೆಗೆ ಆಗಬಹುದಾದ ಅನ್ಯಾಯವನ್ನು ತಡೆಯಬಹುದಿತ್ತು. ಕೊನೆ ಪಕ್ಷ ಆಕೆಯ ಜೀವವನ್ನಾದರೂ ಉಳಿಸಬಹುದಿತ್ತು. ಆದರೆ ಈ ಅಧಿಕಾರಿಗಳು ಹೀಗೆ ಮಾಡಿದ್ದಾದರೂ ಏಕೆ? ಒಂದೆರಡು ದಿನಗಳ ಹಿಂದೆ ಸ್ನೇಹಿತರೊಬ್ಬರು ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಹೀಗೆ ಬರೆದಿದ್ದರೂ “ಪ್ರತಿ ಬಾರಿಯೂ ಅತ್ಯಾಚಾರ ನಡೆದ ಮೇಲೆ ಕ್ಯಾಂಡಲ್ ಸುಡುವಿರೇಕೆ? ಒಮ್ಮೆ ಅಪರಾಧವೆಸಗಿದವನನ್ನು ಸುಟ್ಟುಬಿಡಿ” ಆಗಲಾದರೂ ಈ ದೌರ್ಜನ್ಯ ನಿಲ್ಲಬಹುದೇನೋ ಎಂದು. ನೂರಕ್ಕೆ ನೂರು ಈ ಮಾತು ಸತ್ಯ ಅಲ್ಲವೇ. ಆ ಸ್ನೇಹಿತರಿಗೆ ಬಂದ ಯೋಚನೆ ನಮ್ಮ ದೇಶದ ದೊಡ್ಡ ದೊಡ್ಡ ರಾಜಕಾರಣಿಗಳಿಗೇಕೆ ಬರಲಿಲ್ಲ?,ಅಧಿಕಾರಿಗಳಿಗೇಕೆ ಬರಲಿಲ್ಲ? ವಿವಿಧ ಸಂಘಟನೆಗಳಿಗೆ, ಅದರಲ್ಲೂ ಮಹಿಳಾ ಪರ ಸಂಘಟನೆಗಳಿಗೆ ಬರಲಿಲ್ಲವೇಕೆ?
ಪ್ರತಿ ಬಾರಿ ಹೆಣ್ಣಿನ ಮೇಲೆ ದೌರ್ಜನ್ಯ ಹಾಗು ಕ್ರೌರ್ಯ ನಡೆದು ಇಂತಹ ಹೇಯ ಕೃತ್ಯಗಳು ನಡೆದ ನಂತರ ಅದೆಷ್ಟು ಕ್ಯಾಂಡಲ್ಗಳನ್ನು ಹಚ್ಚಿ ಶಾಂತಿ ಕೋರಿದರೇನು ಫಲ? ಅಪರಾಧಗಳು ನಡೆಯುತ್ತಲೇ ಇವೆ. ಒಂದು ಅಪರಾಧಕ್ಕೆ ಶಿಕ್ಷೆ ನೀಡುವ ಹೊತ್ತಿಗೆ ಆತನಿಂದ ಹತ್ತು ಹಲವು ದುಷ್ಕೃತ್ಯಗಳು ನಡೆದು ಹೋಗಿರುತ್ತವೆ. ಅಪರಾಧದ ಮರುಕ್ಷಣವೇ ಆತ ಯಾರು ಏನು ಎಂದು ವಿಚಾರಿಸುವ ಗೋಜಿಗೆ ಹೋಗದೆ ಬಹಿರಂಗವಾಗಿ ಆತನನ್ನು ಎನ್ ಕೌಂಟರ್ ಮಾಡಿದರೆ ಇಂತಹ ಘಟನೆಗಳು ಮರುಕಳಿಸುವ ಪ್ರಮಾಣ ತಗ್ಗುತ್ತದೆ. ಇಂತಹ ಒಂದು ಶಿಕ್ಷೆಯಿಂದಾದರೂ ಅಪರಾಧಗಳ ಸಂಖ್ಯೆ ಕಡಿಮೆಯಾಗಬಹುದೇನೋ. ನಿರ್ಭಯವಾಗಿ ಅಪರಾಧವೆಸಗುವ ಕಾಮ ಪಿಶಾಚಿಗಳಿಗೆ ಒಂದಿಷ್ಟು ಸಾವಿನ ಭಯ ತೋರಿಸಿದರೆ, ಕ್ರೌರ್ಯದ ಪೊರೆ ಕಳಚ ಬಹುದೇನೋ. ತೀರಾ ಅಸಹಾಯಕರಂತೆ ಎಲ್ಲ ಮುಗಿದ ಮೇಲೆ ರೆಸ್ಟ್ ಇನ್ ಪೀಸ್ (RIP)ಅಂತ ಹೇಳುವುದು ನಿಜಕ್ಕೂ ಸೋಗಲಾಡಿತನದ ಶೋಕವೇ ಸರಿ.
ಇದುವರೆಗೂ ನಡೆದಿರುವ ಅತ್ಯಾಚಾರಗಳಲ್ಲಿ ಎಷ್ಟು ಅಪರಾಧಿಗಳಿಗೆ ಶಿಕ್ಷೆಯಾಗಿದೆ? ಎಷ್ಟು ಆತ್ಮಗಳಿಗೆ ನ್ಯಾಯ ದೊರಕಿದೆ? ಎಷ್ಟು ಪೋಷಕರು ನೆಮ್ಮದಿಯಿಂದ ಉಸಿರಾಡಿದ್ದಾರೆ? ಈ ಎಲ್ಲಾ ಘೋರ ನಷ್ಟಗಳ ಲೆಕ್ಕ ಯಾರು ಕೊಡಬೇಕು? ಭಾರತದಲ್ಲಿ ಯಾವ ಮನೆಯಲ್ಲಿ ಹೆಣ್ಣಿಲ್ಲ, ತನಗೆ ಜನ್ಮ ನೀಡಿದ ಹೆಣ್ಣಿನ ಪ್ರತಿರೂಪ ಉಳಿದೆಲ್ಲಾ ಜೀವಗಳು ಎಂದು ಏಕೆ ಆ ಕಾಮುಕರು ಯೋಚಿಸುವುದಿಲ್ಲ? ಹಾಗೆ ಅವರ ಕಾಮತೃಷೆಗೆ ಹೆಣ್ಣನ್ನು ಬಲಿ ಹಾಕಲೇ ಬೇಕೆಂದರೆ ಅವನ ತಾಯಿಯೋ, ತಂಗಿಯೋ, ಹೆಂಡತಿಯೋ ಅಥವಾ ತನ್ನ ಮಗಳ ಮೇಲೆ ಇಂತಹ ಕೃತ್ಯ ಎಸಗಲಿ ಆಗ ಮೆಚ್ಚ ಬಹುದೇನೋ ಅವನ ಮಾನಸಿಕ ಸ್ಥಿತಿ ಹೇಗಿದೆ ಎಂದು. ಸಾಮೂಹಿಕವಾಗಿ ಅತ್ಯಾಚಾರ ಎಸಗುವ ಕಾಮ ಪಿಶಾಚಿಗಳನ್ನು ಕೆಲ ರಾಷ್ಟ್ರಗಳಲ್ಲಿ ಇರುವಂತೆ ಬಹಿರಂಗವಾಗಿ ನೇಣು ಹಾಕುವುದು ಅಥವಾ ಕಲ್ಲು ಹೊಡೆದು ಜೀವಂತವಾಗಿಯೇ ಸಮಾಧಿ ಮಾಡುವುದು….. ಈ ತರಹದ ಶಿಕ್ಷೆಗಳು ಜಾರಿಗೆ ಬಂದರಷ್ಟೇ ಪರರ ಮನೆಯ ಹೆಣ್ಣು ಮಕ್ಕಳಿಗೆ ನಿರ್ಭಯವಾಗಿ, ನಿರಾತಂಕವಾಗಿ ಹಾಗು ನೆಮ್ಮದಿಯ ಬಾಳು ನಡೆಸಲು ಸಾಧ್ಯ.
ಅಂದು ನಿರ್ಭಯಳಿಂದ ಹಿಡಿದು ಇಂದು ಮಧುವಿನ ತನಕ ಅದೆಷ್ಟೋ ಹೆಣ್ಣುಮಕ್ಕಳು ಅಮಾನುಷವಾಗಿ ಪಾಪಿಗಳ ದುಷ್ಟತನಕ್ಕೆ ಬಲಿಯಾಗಿ ಭೂಗರ್ಭ ಸೇರಿದರು. ಕಾನೂನು ಕಣ್ಣು ಮುಚ್ಚಿ ನಿದ್ದೆ ಮಾಡುತ್ತಿದೆ. ಆರಕ್ಷಕರೆಂಬ ಹಣೆಪಟ್ಟಿ ಹಚ್ಚಿಕೊಂಡು ಒಂದಿಷ್ಟು ಅಧಿಕಾರಿಗಳು ದ್ವಾರಪಾಲಕರಂತಿದ್ದಾರೆ ಅಷ್ಟೇ. ಅನ್ಯಾಯದ ವಿರುದ್ಧ ಹೋರಾಡಲು, ಸಿಡಿದೇಳಲು, ನೊಂದವರ ಆಕ್ರಂದನ ಕೇಳಲು, ಯಾರಿಗೂ ಬಿಡುವಿಲ್ಲ, ಇದ್ದರೂ ಕೇಳುವ ಮನಸ್ಸಿಲ್ಲ.
✍✍✍ಸುನಿತಾಪ್ರಕಾಶ್
ಶುಶ್ರೂಷಕಿ ಆಶ್ರಯ ಹಾಸ್ಪಿಟಲ್
ಅಂಕಣಗಾರ್ತಿ ಜನಮಿಡಿತ
ದೂ. ಸ. 9620642054