ವೀರಶೈವ ಲಿಂಗಾಯತಕ್ಕೆ ಮಾತ್ರ ಬೆಂಬಲ, ಮಹಾಸಭಾ ನಿರ್ಣಯ
ಇಂದು ಸಭೆ ಸೇರಿದ್ದ ಅಖಿಲ ಭಾರತೀಯ ವೀರಶೈವ ಮಹಾಸಭಾ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಶಾಮನೂರು ಶಿವಶಂಕರಪ್ಪರ ನೇತೃತ್ವದಲ್ಲಿ ನಡೆದ ಇಂದಿನ ಸಭೆಯಲ್ಲಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಲಾಗಿದೆ. ವೀರಶೈವರು ಹಾಗು ಲಿಂಗಾಯತರು ಒಂದೇ, ನಮ್ಮಲ್ಲಿಯೇ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಬೇಡ ಎಂದು ಖಂಡನಾ ನಿರ್ಣಯವನ್ನ ಅಖಿಲ ಭಾರತ ಮಹಾಸಭಾದ ಕಾರ್ಯಕಾರಿ ಸಮಿತಿ ತೆಗೆದುಕೊಂಡಿದೆ.
ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಸಮಾಜದ ಪ್ರಮುಖರು ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ನಾನು ಖಂಡಿಸುತ್ತೇನೆ. ನಾವೆಲ್ಲರೂ ಒಂದೇ. ವೀರಶೈವ ಹಾಗು ವೀರಶೈವ ಲಿಂಗಾಯತರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಮ್ಮ ಧರ್ಮ ಸ್ಥಾಪಕರು, ಧರ್ಮ ಗುರುಗಳು ಎನ್ನುವ ಅನಗತ್ಯ ವಿಚಾರಗಳ ಚರ್ಚೆ ಬೇಡ. ನಮಗೆ ಬೇಕಿರುವುದು ಐಕ್ಯತೆ. ಸಮಾಜವನ್ನು ಇನ್ನಷ್ಟು ಸಂಘಟನೆ ಮಾಡಲು ಪ್ರಯತ್ನಿಸೋಣ.
ಅನಗತ್ಯ ವಿಭಜನೆ ಬೇಡ. ಎಲ್ಲರೂ ಒಗ್ಗಟ್ಟಾಗಿ ಸಾಗೋಣ ಎಂದು ಸಂದೇಶ ನೀಡಿದ್ದಾರೆ. ಬಸವತತ್ವದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಬೇಡ ಎಂದಿದ್ದಾರೆ.
2013ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದ ನಿರ್ಣಯವನ್ನೇ ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಗಣಿಸಬೇಕು ಎಂದು ಇಂದಿನ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಬಸವ ಧರ್ಮದ ಆಧಾರದ ಮೇಲೆ ನಮ್ಮನ್ನ ಒಡೆಯವುದು ಬೇಡ. ಬಸವ ತತ್ವ ಎನ್ನುವ ಅಂಶವನ್ನು ತೆಗೆದು ಹಾಕಬೇಕು. ಎಲ್ಲರನ್ನೂ ಒಗ್ಗೂಡಿಸಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವ ಕುರಿತು ಕೇಂದ್ರ ಸರ್ಕಾರವು, ಈ ಹಿಂದೆ ಅಖಿಲ ಭಾರತ ವೀರಶೈವ ಮಹಾಸಭಾ ತೆಗೆದುಕೊಂಡಿದ್ದ ನಿರ್ಣಯಕ್ಕೆ ಮಾನ್ಯತೆ ನೀಡಬೇಕು ಎಂದಿದ್ದಾರೆ.
ವೀರಶೈವ-ಲಿಂಗಾಯತರನ್ನ ಪ್ರತ್ಯೇಕಗೊಳಿಸದೇ, ಎಲ್ಲರನ್ನೂ ಒಗ್ಗಟ್ಟಾಗಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ಶಾಮನೂರು ಶಿವಶಂಕರಪ್ಪ ಕೇಳಿಕೊಂಡಿದ್ದಾರೆ.
2013 ರಲ್ಲಿ ಪ್ರತ್ಯೇಕ ಧರ್ಮ ಸ್ಥಾಪಿಸುವ ಕುರಿತು ಅಖಿಲ ಭಾರತೀಯ ವೀರಶೈವ ಮಹಾಸಭಾ ಮನವಿ ಮಾಡಿತ್ತು. ಅಂದಿನ ಯುಪಿಎ ಸರ್ಕಾರ ಅದನ್ನ ತಿರಸ್ಕರಿಸಿತ್ತು. ಈಗ ಅದನ್ನೇ
ಪುನರ್ ಪರಿಶೀಲನೆ ನಡೆಸಬೇಕೆಂದು
ಮಹಾಸಭಾ ನಿರ್ಣಯ ತೆಗೆದುಕೊಂಡಿದೆ.